ಮುಂಬಯಿ: ವಿದ್ಯಾಬೋಧಿನಿ ಪೌಢ ಶಾಲೆ ಬಾಳಿಲ ಸುಳ್ಯ ಮಕ್ಕಳಿಂದ ಅ. 12ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವೇ ಸ್ಥಾಪಿಸಿರುವ ಕನ್ನಡ ಶಾಲೆಯ ಬೆಳವಣಿಗೆಗಾಗಿ ಕನ್ನಡ ಮಕ್ಕಳ ಉಪಯೋಗದ ದೃಷ್ಟಿಯನ್ನಿಟ್ಟುಕೊಂಡು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು ಪ್ರಾರಂಭಿಸಲು 5 ಲಕ್ಷ ರೂ. ಗಳ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ, ಇದು ನಮ್ಮ ಶಾಲೆಗೆ ಒಂದು ಚಿಕ್ಕ ಕೊಡುಗೆಯಾಗಿದೆ. ಮುಂಬರುವ ದಿನಗಳಲ್ಲಿ ಕನ್ನಡ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಷೆ ಎಂದು ತಿಳಿಸಿದರು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್ ಅವರು ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿ, ಸಂಘದ ಉದ್ದೇಶವನ್ನು ಸ್ವಾಗತಿಸಿ ಶಾಲೆಯ ಬೆಳವಣಿಗೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ| ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ಕನ್ನಡ ಶಾಲೆಯ ಬೆಳವಣಿಗೆಗಾಗಿ ಕರ್ನಾಟಕ ಸಂಘ ಒಂದು ಹೊಸ ಹೆಜ್ಜೆ ಇಟ್ಟು ಈ ರೀತಿಯ ಕೆಲಸಗಳನ್ನು ಮಾಡುತ್ತಿರುವುದನ್ನು ಸಂತಸ ತಂದಿದೆ. ದೆಹಲಿ ಕರ್ನಾಟಕ ಸಂಘ ಹಾಗೂ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ದೆಹಲಿ ಕನ್ನಡಿಗರ ಎರಡು ಕಣ್ಣುಗಳಿದ್ದ ಹಾಗೆ, ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾವಣೆಗಳು ನಡೆಯುತ್ತವೆ. ಚುನಾವಣೆಯ ಅನಂತರ ಎರಡೂ ಸಂಸ್ಥೆಗಳು ಒಟ್ಟುಗೂಡಿ ಕೆಲಸ ಮಾಡಿದರೆ ಕನ್ನಡದ ಸ್ವರವನ್ನು ಯಾರೂ ತುಳಿಯಲಿಕ್ಕೆ ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇನ್ನೋರ್ವ ಅತಿಥಿ ಡಾ| ರಂಗನಾಥ ಸಿಂಗಾರಿ ಅವರು ಮಾತನಾಡಿ, ಕನ್ನಡ ಶಾಲೆಯ ಅಭಿವೃದ್ಧಿಗೆ ತಮ್ಮ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೋಮನಾಥ ಬಿರಾದಾರ ಮಾತನಾಡಿ, ಕನ್ನಡ ಶಾಲೆ ಮತ್ತು ಕರ್ನಾಟಕ ಸಂಘ ಎರಡೂ ಒಂದೇ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಶಿವಾನಂದ ಸಿರ್ಸಿಕರ್ ಅವರು ಮಾತನಾಡಿ, ವಿದ್ಯಾಸಂಸ್ಥೆಯ ಬೆಳವಣಿಗೆಗೆ ಸಂಘದ ಕೊಡುಗೆಯನ್ನು ಶ್ಲಾಘಿಸಿದರು. ಅಲ್ಲದೇ ಸಂಘ ಈ ರೀತಿಯ ಸಹಕಾರ ನೀಡುತ್ತಾ ಬಂದರೆ ದೆಹಲಿಯಲ್ಲಿ ಇನ್ನೊಂದು ಕನ್ನಡ ಶಾಲೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾಬೋಧಿನಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ನಿರ್ವಹಿಸಿದರು.