ಮುಂಬಯಿ, ಆ. 30: ಬಹುಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುವ ಕರ್ನಾಟಕ ಸಂಘ ಮುಂಬಯಿ ಇದರ ಬೃಹತ್ ಕಟ್ಟಡದ ಕಾಮಗಾರಿಯು ಮಾಟುಂಗ ಪಶ್ಚಿಮದಲ್ಲಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಸಹೃದಯಿಗಳ ಆರ್ಥಿಕ ನೆರವು ಬೇಕಾಗಿದೆ. ಈ ಸಂಘದಲ್ಲಿ ಇತಿಹಾಸಕ್ಕೆ ಸಂದಿರುವ ಅನೇಕ ಪುರಾತನ ಸಂಸ್ಕೃತಿಗಳು ಅನಾವರಣಗೊಂಡಿವೆ. ಮಾತೃ ವಾತ್ಸಲ್ಯದ ಆರೈಕೆಯೊಂದಿಗೆ ವಿಭಿನ್ನ ಕಲಾವಿದರನ್ನು ಪ್ರೋತ್ಸಾಹಿಸಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಸಂಘ ಮುಂಬಯಿ ತುಳು ಕನ್ನಡಿಗರಿಗೆ ತವರು ಮನೆಯಾಗಿದೆ ಎಂದು ಭಾಗವತ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.
ಆ. 29ರಂದು ಸಂಜೆ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶ್‌ನ ಸಭಾಗೃಹದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಪ್ರಾಯೋಜಕತ್ವದಲ್ಲಿ ಜರಗಿದ ಯಕ್ಷಗಾನ ತಾಳ ಮದ್ದಳೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮೂಲ ಪರಂಪರೆಗೆ ಧಕ್ಕೆಯಾಗದೆ ಕಾಲಕ್ಕೆ ತಕ್ಕಂತೆ ಬದಲಾವಣೆಯು ಅನಿವಾರ್ಯವಾ ಗಿದೆ. ಅದನ್ನು ಮೈಗೂಡಿಸುವಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗವು ತನ್ನದೇ ಆದ ಸ್ವಂತಿಕೆ ಉಳಿಸಿ ಕೊಂಡಿದೆ. ಯಕ್ಷಗಾನ, ನಾಟಕ, ಸಾಹಿತ್ಯ ಮುಂತಾದ ಪ್ರತಿಭಾ ವಿಕಾಸಕ್ಕೆ ವೇದಿಕೆ ನಿರ್ಮಿಸುವ ಈ ಸಂಸ್ಥೆಯ ಯೋಗದಾನ ಮಹತ್ತರವಾದದ್ದು ಎಂದು ನುಡಿದು ಶುಭ ಹಾರೈಸಿದರು.
ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ಮನೋಹರ ಎಂ. ಕೊರಿ ಸ್ವಾಗತಿಸಿ ಕಲಾವಿದರನ್ನು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಓಂದಾಸ್‌ಕಣ್ಣಂಗಾರ್ ಪ್ರಸ್ತಾವಿಕವಾಗಿ ಮಾತನಾಡಿ, ಧ್ಯೇಯೋದ್ದೇಶಗಳನ್ನು ವಿವರಿಸಿದರು. ಸಾಹಿತಿ, ರಂಗಕರ್ಮಿ ಡಾ| ಭರತ್ ಕುಮಾರ್ ಪೊಲಿಪು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ದಿನೇಶ್ ಕಾಮತ್ ಅವರು ಧೀಶಕ್ತಿ ಮಹಿಳಾಯಕ್ಷಬಳಗ ಪುತ್ತೂರು ತಂಡದ ಮುಖ್ಯಸ್ಥೆ ನ್ಯಾಯವಾದಿ ಪದ್ಮಾ ಕೆ. ಆರ್. ಆಚಾರ್ಯ ಮತ್ತು ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಸಂಚಾಲಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಅವರನ್ನು ಗೌರವಿಸಿದರು.
ಭೀಷ್ಮ ವಿಜಯ ಪೌರಾಣಿಕ ಯಕ್ಷಗಾನ ತಾಳ ಮದ್ದಳೆಯಲ್ಲಿ ಭಾಗವತರಾಗಿ ಅಮೃತಾ ಅಡಿಗ, ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ, ಚೆಂಡೆಯಲ್ಲಿ ಅಪೂರ್ವ ಸುರತ್ಕಲ್ ಮತ್ತು ಕೌಶಿಕ್ ರಾವ್ ಪುತ್ತಿಗೆ, ಅರ್ಥಧಾರಿಗಳಾಗಿ ನ್ಯಾಯವಾದಿ ಪದ್ಮಾ ಕೆ. ಆರ್. ಆಚಾರ್ಯ, ವಿದುಷಿ ಸುಮಂಗಲಾ ರತ್ನಾಕರ್, ಜಯಲಕ್ಷ್ಮೀ ಭಟ್, ಆಶಾಲತಾ ಕಲ್ಲೂರು, ಅಶ್ವಿನಿ ನಿಡ್ವಣ್ಣಾಯ ಪಾಲ್ಗೊಂಡರು.
ಚಿತ್ರ-ವರದಿ: ರಮೇಶ್ ಅಮೀನ್