Advertisement

ಕರ್ನಾಟಕ ಸಂಘ ಕಲ್ಯಾಣ್‌ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ

04:52 PM Nov 20, 2018 | |

ಕಲ್ಯಾಣ್‌: ರನ್ನ, ಪಂಪ ಹಾಗೂ ಜನ್ನರು ನಮ್ಮ ಸಿರಿವಂತ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಮಾತುಗಳು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿರದೆ ಸಮಸ್ತ ಕನ್ನಡಿಗರ ಹೃದಯಾಂತರಾಳದ ಇಚ್ಛೆಯಾಗಲಿ. ಕನ್ನಡ, ಭಾಷೆ, ಕಲೆ, ಸಂಸ್ಕೃತಿಯ ಬಗ್ಗೆ ನಮಗೆ ಅಭಿಮಾನ ಮೂಡಿದಾಗ ಮಾತ್ರ ಅವರನ್ನು ಬೆಳೆಸಲು ಸಾಧ್ಯವಿದೆ. ಹೊರನಾಡ ಕನ್ನಡಿಗರ ಕನ್ನಡಾಭಿಮಾನ ಮೆಚ್ಚುವಂಥದ್ದಾಗಿದೆ ಎಂದು ಬಿಲ್ಲವರ ಅಸೋ. ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ನುಡಿದರು.

Advertisement

ನ. 18 ರಂದು ಕಲ್ಯಾಣ್‌ ಪೂರ್ವದ ಮೋರ್ಯ ಸಭಾಗೃಹದಲ್ಲಿ ನಡೆದ ಕರ್ನಾಟಕ ಸಂಘ ಕಲ್ಯಾಣ್‌ ಇದರ 16 ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮಕ್ಕಳಿಗೆ ಕನ್ನಡಾಭಿಮಾನವನ್ನು ಬೆಳೆಸುವ ಕಾರ್ಯ ನಡೆಯಬೇಕು. ಆಗ ಕನ್ನಡ ಭಾಷೆ ಉಳಿಯಲು ಸಾಧ್ಯ. ಕರ್ನಾಟಕ ವಿವಿಧ ಭಾಗಗಳಲ್ಲಿ ಕನ್ನಡ ಮಾತನಾಡುವ ಶೈಲಿ ಮರೆಯಾದರೂ ಭಾಷೆ ಮಾತ್ರ ಒಂದೇ ಆಗಿದೆ. ಒಂದೂವರೆ ದಶಕಗಳ ಕಲ್ಯಾಣ್‌ ಕರ್ನಾಟಕ ಸಂಘದ ಕನ್ನಡ ನಾಡು-ನುಡಿ ಸೇವೆ ಅಭಿನಂದನೀಯವಾಗಿದೆ ಎಂದರು.

ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಡೊಂಬಿವಲಿಯ ಫ್ರೆಂಡ್ಸ್‌ ಸ್ವಾವಲಂಬನಾ ಕೇಂದ್ರದ ಸಂಸ್ಥಾಪಕ ವೆಂಕಟೇಶ್‌ ಪೈ ಅವರು ಮಾತನಾಡಿ, ಹದಿನಾರರ ಯೌವನಾಸ್ಥೆಯಲ್ಲಿರುವ ಕಲ್ಯಾಣ್‌ ಕರ್ನಾಟಕ ಸಂಘದ ಕಾರ್ಯ ಪ್ರಶಂಸನೀಯವಾಗಿದ್ದು, ಸಂಘದ ಸದಸ್ಯರ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ಕನ್ನಡ ನಾಡಿನಲ್ಲಿ ಇದ್ದೇವೆ ಎಂಬ ಭಾವನೆ  ಮೂಡುತ್ತಿದೆ. ಸಂಘವು ಮುಂಬರುವ ದಿನಗಳಲ್ಲಿ ಕನ್ನಡ ಕಲಿಕಾವರ್ಗ ಹಾಗೂ ಭಜನಾ ವರ್ಗಗಳನ್ನು ಪ್ರಾರಂಭಿಸಬೇಕು. ನಿಮ್ಮೆಲ್ಲರ ಕನ್ನಡಾಭಿಮಾನವನ್ನು ಕಂಡಾಗ ಸಂತೋ ಷವಾಗುತ್ತಿದೆ. ಸಂಘದ ನಾಡು- ನುಡಿಯ ಸೇವೆ ಇದೇ ಮಾದರಿಯಲ್ಲಿ ಮುಂದುವರಿಯುತ್ತಿರಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಲೇಖಕ, ಕವಿ ರಮಣ್‌ ಶೆಟ್ಟಿ ರೆಂಜಾಳ, ಸಮಾಜ ಸೇವಕ ಚಿಕ್ಕಣ್ಣ ಕುಲಕರ್ಣಿ ದಂಪತಿಯನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಇದೇ ಸಂದರ್ಭದಲ್ಲಿ ಯುವ ಕ್ರೀಡಾಪಟುಗಳಾದ ಋತಿಕಾ ಪೂಜಾರಿ, ಸಾನಿಕಾ ಸುವರ್ಣ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕೆ. ಎನ್‌. ಸತೀಶ್‌ ಹಾಗೂ ಸುನೀತಾ ಶೆಟ್ಟಿ ಅವರು ಸಮ್ಮಾನಿತರನ್ನು ಪರಿಚಯಿಸಿದರು.

ಸಂಘದ ಅಧ್ಯಕ್ಷ ದರ್ಶನಾ ಸೋನ್ಕರ್‌ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡದ ಕೈಂಕರ್ಯವನ್ನು ಮೂಲ ಮಂತ್ರವಾಗಿಸಿದ ಕಲ್ಯಾಣ್‌ ಕರ್ನಾಟಕ ಸಂಘ ಪ್ರಸ್ತುತ ಹದಿನಾರರ ಯೌವನಾವಸ್ಥೆಯಲ್ಲಿ ಸಂಘದ ಹಿರಿಯರ ಮಾರ್ಗದರ್ಶನ ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ನಾಡು-ನುಡಿಯ ಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ಕನ್ನಡಪರ ಕಾರ್ಯಗಳಿಗೆ ಎಲ್ಲರ ಸಹಾಯ, ಸಹಕಾರ ಸದಾಯಿರಲಿ ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Advertisement

ಸಮ್ಮಾನ ಸ್ವೀಕರಿಸಿ ಮಾತನಾಡಿದ ರಮಣ್‌ ಶೆಟ್ಟಿ ರೆಂಜಾಳ ಇವರು ಮಾತನಾಡಿ, ಜನ್ಮಭೂಮಿ ಕಾರ್ಕಳದ ರೆಂಜಾಳದ ಮಣ್ಣಿನ ಗುಣವೇನೋ ಗೊತ್ತಿಲ್ಲ. ಅನೇಕ ಸಾಹಿತಿಗಳನ್ನು, ಕಲಾವಿದರನ್ನು ನಮ್ಮೂರು ನೀಡಿದೆ. ಪುಣ್ಯಭೂಮಿಯ ಪ್ರಭಾವದಿಂದಲೇ ವೃತ್ತಿಯಲ್ಲಿ ಎಂಜಿನೀಯರಿಂಗ್‌ ಆದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಬೆಳೆದೆ. ಕಲಾವಿದರು, ಸಾಹಿತಿಗಳನ್ನು ಸಮ್ಮಾನಿಸುವುದರಿಂದ ಅವರ ಉತ್ಸಾಹ ಇಮ್ಮಡಿಯಾಗುತ್ತದೆ. ಹೊರನಾಡ ಕನ್ನಡಿಗರ ಹೆಮ್ಮೆಯ ಕಲ್ಯಾಣ್‌ ಕರ್ನಾಟಕ ಸಂಘ ನೀಡಿದ ಈ ಸಮ್ಮಾನದಿಂದ ನನ್ನ ಸಾಧನೆಗೆ ಗರಿಮೂಡಿಸಿದಂತಾಗಿದೆ ಎಂದು ನುಡಿದರು.

ಸಂಘದ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಗುರುದೇವ ಭಾಸ್ಕರ್‌ ಶೆಟ್ಟಿ ಅವರು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭಹಾರೈಸಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಗೋಪಾಲ್‌ ಹೆಗ್ಡೆ, ಸಂಘದ ಸಲಹೆಗಾರ ಡಾ| ಸುರೇಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಶಾಂತಿ ಶೆಟ್ಟಿ ಅವರು ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.

ಗಣ್ಯರು 2018ನೇ ಸಂಸ್ಥೆಯ ವಾರ್ಷಿಕ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಂಘದ ಗೌರವ ಗೌರವ ಕಾರ್ಯದರ್ಶಿ ಕೆ. ಚಂದ್ರಶೇಖರ್‌ ಅವರು ವಾರ್ಷಿಕ ವರದಿ ಮಂಡಿಸಿದರು. ಸುನೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವನಾಥ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ  ಪ್ರೊ| ವೆಂಕಟೇಶ್‌ ಪೈ, ಗುರುದೇವ ಭಾಸ್ಕರ ಶೆಟ್ಟಿ, ನಂದಾ ಶೆಟ್ಟಿ, ಡಾ| ಸುರೇಂದ್ರ ಶೆಟ್ಟಿ, ರಮೇಶ್‌ ಡಿ. ಶೆಟ್ಟಿ, ಗೋಪಾಲ್‌ ಹೆಗ್ಡೆ, ದರ್ಶನಾ ಸೋನ್ಕರ್‌, ಕೆ. ಎನ್‌. ಸತೀಶ್‌, ನ್ಯಾಯವಾದಿ ನೂತನ್‌ ಹೆಗ್ಡೆ, ಕೆ. ಚಂದ್ರಶೇಖರ್‌, ಪ್ರಶಾಂತಿ ಶೆಟ್ಟಿ, ವಿಶ್ವನಾಥ ಶೆಟ್ಟಿ    ಮೊದಲಾದವರು ಉಪಸ್ಥಿತರಿದ್ದರು.

ಗಣ್ಯರುಗಳಾದ ಟಿ. ಎಸ್‌. ಉಪಾಧ್ಯಾಯ, ಡಾ| ಕೃಷ್ಣ ಶೆಟ್ಟಿ, ಕರುಣಾಕರ ಶೆಟ್ಟಿ, ವಾಮನ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗೀತಾ ಪೂಜಾರಿ, ಸುಹಾಸ್‌ ಕುಲಕರ್ಣಿ, ಜಯಂತ್‌ ದೇಶು¾ಖ್‌ ಮೊದಲದವರು ಸಹಕರಿಸಿದರು ನೂರಾರು ತುಳು-ಕನ್ನಡಿಗರು ಪಾಲ್ಗೊಂಡಿದ್ದರು. 

ಚಿತ್ರ-ವರದಿ:ಗುರುರಾಜ ಪೋತನೀಸ್‌.

Advertisement

Udayavani is now on Telegram. Click here to join our channel and stay updated with the latest news.

Next