ಶನಿವಾರದಂದು ಗೃಹಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ 6ನೇ ವರದಿ ಸಲ್ಲಿಸಿದ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಯೋಗವು, ವಸತಿ, ಅರಣ್ಯ, ಜಲಸಂಪನ್ಮೂಲ, ಲೋಕೋಪಯೋಗಿ, ಕೈಗಾರಿಕೆ, ಬಂದರು, ಒಳನಾಡು ಸಹಿತ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 278 ಪುಟಗಳ 882 ಶಿಫಾರಸುಗಳನ್ನು ಮಾಡಿದೆ.
Advertisement
ಪ್ರಮುಖವಾಗಿ ಕರ್ನಾಟಕ ಗೃಹ ಮಂಡಳಿಯು ಮನೆಗಿಂತ ನಿವೇಶನ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದು, ಈ ನಿವೇಶನಗಳು ನಿಗದಿತ ಅವಧಿಯಲ್ಲಿ ಮನೆ ಕಟ್ಟುವ ಬದಲು ಹೂಡಿಕೆಗಷ್ಟೇ ಬಳಕೆಯಾಗುತ್ತಿದೆ. ಖಾಲಿ ನಿವೇಶನಗಳ ಸಂಪೂರ್ಣ ಮಾರಾಟ ಪತ್ರವನ್ನು ನೋಂದಾಯಿಸಲು ನಿವೇಶನದ ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದಂಡ ವಿಧಿಸಬಹುದು. ನಿರ್ಮಿತ ಮನೆಗಳ ಮೇಲೆ ವಿಧಿಸುವ ನಿರ್ವಹಣೆ ಶುಲ್ಕದ ಎರಡುಪಟ್ಟು ನಿರ್ವಹಣೆ ಶುಲ್ಕವನ್ನು ಖಾಲಿ ನಿವೇಶನಗಳ ಮೇಲೆ ವಿಧಿಸಬಹುದು. ಕರ್ನಾಟಕ ಕೊಳೆಗೇರಿ ಪ್ರದೇಶಗಳು (ಸುಧಾರಣೆ ಮತ್ತು ತೆರವು) ಕಾಯ್ದೆ 1973ಕ್ಕೆ ತಿದ್ದುಪಡಿ ತಂದು, ಘೋಷಿತ ಜಮೀನುಗಳ ಅತಿಕ್ರಮ ತೆರವಿಗಾಗಿ ಮಾರ್ಗಸೂಚಿ ಮೌಲ್ಯದ ಶೇಕಡಾವಾರು ದಂಡ ನಿಗದಿಪಡಿಸಬೇಕು. ಅನಧಿಕೃತ ಸಾಗುವಳಿ ಮಾಡಿದರೆ ಮೊದಲ ಬಾರಿಗೆ 500 ರೂ. ಇರುವ ದಂಡದ ಮೊತ್ತವನ್ನು 5 ಸಾವಿರ ರೂ.ಗೆ, ಅನಂತರದ ಅಪರಾಧಕ್ಕೆ 1,000 ರೂ. ಇರುವ ದಂಡವನ್ನು 10 ಸಾವಿರ ರೂ.ವರೆಗೆ ಹಾಗೂ ಗರಿಷ್ಠ 48 ಸಾವಿರ ರೂ.ವರೆಗೆ ಹೆಚ್ಚಿಸಬಹುದು ಎಂದು ಶಿಫಾರಸು ಮಾಡಿದೆ.
ನೀರಾವರಿ ಯೋಜನೆಗಳಿಗೆ ಹಾನಿ ಮಾಡುವವರ ಅಪರಾಧ ಸಾಬೀತಾದರೆ 1 ಲಕ್ಷ ರೂ., ಜಲಾಗಾರ, ಜಲಾಶಯಗಳ ಅತಿಕ್ರಮ ಪ್ರವೇಶ ಮಾಡಿದರೆ, 25 ಸಾವಿರ ರೂ., ಕಾನೂನುಬಾಹಿರವಾಗಿ ನೀರು ಬಳಕೆ ಮಾಡಿದರೆ, ಬೆಳೆ ಬೆಳೆದರೆ 1.50 ಲಕ್ಷ ರೂ., ರಾಜ್ಯ ಹೆದ್ದಾರಿ ಅತಿಕ್ರಮ ಮಾಡಿದರೆ 25 ಸಾವಿರ ರೂ.ಗಳಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶ ನೀಡಬಹುದು. ಹೆದ್ದಾರಿಗೆ ಹಾನಿಯುಂಟು ಮಾಡಿದರೆ 1 ಲಕ್ಷ ರೂ., ಸುಂಕ ಪಾವತಿಸದೆ ಸೇತುವೆ ಪ್ರವೇಶಿಸಿದರೆ 2ರಿಂದ 5 ಸಾವಿರ ರೂ.ಗಳವರೆಗೆ ದಂಡ, ಸರಕಾರಿ ಭೂಮಿಯಲ್ಲಿ ಕಟ್ಟಡ ಕಲ್ಲಿನ ಗುತ್ತಿಗೆಗಳು ಅನುಮೋದಿತ ವಾರ್ಷಿಕ ಉತ್ಪಾದನ ಸಾಮರ್ಥ್ಯದ ಕನಿಷ್ಠ ಶೇ.50ರಷ್ಟನ್ನು ಉತ್ಪಾದಿಸಬೇಕು. ಇಲ್ಲದಿದ್ದರೆ, ಉತ್ಪಾದನೆ ಕೊರತೆಗೆ ರಾಜಧನವನ್ನು ದಂಡದ ರೂಪದಲ್ಲಿ ವಸೂಲಿ ಮಾಡಬಹುದು. ಇದನ್ನು ಮರಳು ಗಣಿಗಾರಿಕೆಗೂ ಅನ್ವಯಿಸಬಹುದು. ಉಪಖನಿಜ ರಿಯಾಯಿತಿ ಪರವಾನಗಿ ಹೊಂದಿದವರ ಹೆಸರು, ರಾಷ್ಟ್ರೀಯತೆ ಇತ್ಯಾದಿ ಒದಗಿಸಲು ವಿಫಲರಾದರೆ 1.22 ಲಕ್ಷ ರೂ. ದಂಡ ವಸೂಲಿ ಮಾಡಬಹುದು ಎಂದು ಸಲಹೆ ನೀಡಿದೆ. ಪ್ರವೇಶ ಶುಲ್ಕ ಹೆಚ್ಚಿಸಲೂ ಸಲಹೆ
ಸಂರಕ್ಷಿತ ವನ್ಯಜೀವಿ ವಲಯದ ಪ್ರವೇಶ ಶುಲ್ಕವನ್ನೂ ಪರಿಷ್ಕರಿಸಲು ಶಿಫಾರಸು ಮಾಡಿದ್ದು, ಭಾರತೀಯ ವ್ಯಕ್ತಿಗೆ 50 ರೂ. ವಿದೇಶಿಗರಿಗೆ 150 ರೂ., ಮೋಟಾರು ಕಾರು, ಜೀಪು ಇತ್ಯಾದಿ ವಾಹನಗಳಿಗೆ 400 ರೂ. ಹಾಗೂ ಭಾರೀ ವಾಹನಗಳಿಗೆ 500 ರೂ. ಪ್ರವೇಶ ಶುಲ್ಕ ವಿಧಿಸಲೂ ಶಿಫಾರಸು ಮಾಡಿದೆ.
Related Articles
Advertisement