ನಮ್ಮ ಸಂವಿಧಾನದಲ್ಲಿ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಬಗ್ಗೆ ಉಲ್ಲೇಖವೇ ಇಲ್ಲ, ಅಲ್ಲದೆ ಹೊಂದಬಾರದು ಎಂದೂ ಅದು ಹೇಳುವುದೂ ಇಲ್ಲ. ಈ ಬಗ್ಗೆ ಎಸ್.ಆರ್. ಬೊಮ್ಮಾಯಿ ಮತ್ತು ಯೂನಿಯನ್ ಆಫ್ ಇಂಡಿಯಾ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ “ರಾಜ್ಯವೊಂದಕ್ಕೆ ತನ್ನದೇ ಧ್ವಜ ಹೊಂದಲು ಅವಕಾಶ ಇದೆಯಾದರೂ ಅದು ರಾಷ್ಟ್ರಧ್ವಜಕ್ಕಿಂತ ಕೆಳಗೆ ಹಾರಬೇಕು, ಅದರಿಂದಾಗಿ ರಾಷ್ಟ್ರಧ್ವಜಕ್ಕೆ ಅವಮಾನ ಆಗಬಾರದು’ ಎಂದು ಸ್ಪಷ್ಟವಾಗಿ ಹೇಳಿದೆ.
Advertisement
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಹೊಂದುವ ವ್ಯವಸ್ಥೆ ಇದ್ದರೂ ಆ ಬಗ್ಗೆ ಸಂವಿಧಾನದಲ್ಲಿಯೇ ಉಲ್ಲೇಖವಿದೆ. ಮಾತ್ರವಲ್ಲ ಅದಕ್ಕೆ ಪ್ರತ್ಯೇಕ ಸಂವಿಧಾನವೇ ಇದೆ. ಉಳಿದ ರಾಜ್ಯಗಳಿಗೆ ಅನ್ವಯವಾಗುವ ನಿಯಮ, ಕಾನೂನುಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. 1965ರಲ್ಲಿ ಕನ್ನಡದ ಕಟ್ಟಾಳು ಮ. ರಾಮಮೂರ್ತಿ ಕನ್ನಡ ಭಾಷೆಗಾಗಿ ಪ್ರತ್ಯೇಕ ಧ್ವಜ ಬೇಕು ಎಂಬುದನ್ನು ಮನಗಂಡು ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ರೂಪಿಸಿದ್ದರು. ಕರ್ನಾಟಕ ಸರಕಾರ ಅಧಿಕೃತವಾಗಿ ಅದನ್ನು ಒಪ್ಪಿಕೊಳ್ಳದಿದ್ದರೂ ಕನ್ನಡಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೂ ಅದನ್ನೇ ಬಳಕೆ ಮಾಡುತ್ತಾ ಬರಲಾಗುತ್ತಿತ್ತು. 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿತ್ತು. ಆದರೆ ಕಾನೂನಿನ ತೊಡಕಿನಿಂದ ಅದು ಸಾಧ್ಯವಾಗಲಿಲ್ಲ.
ಮೊದಲಿನಿಂದಲೂ ಕನ್ನಡಿಗರು ತಾಳ್ಮೆ, ಶಾಂತಿ, ಧೈರ್ಯ, ಸ್ವಾಭಿಮಾನಕ್ಕೆ ಹೆಸರಾದವರು. ಅದಕ್ಕಾಗಿಯೇ ಸದ್ಯ ಇರುವ ಕೆಂಪು, ಹಳದಿಯ ಜತೆಗೆ ಶಾಂತಿಯ ಸಂಕೇತವಾಗಿರುವ ಬಿಳಿ ಬಣ್ಣವನ್ನು ಸೇರಿಸಲಾಗಿದೆ. ಜತೆಗೆ ರಾಜ್ಯ ಧ್ವಜ ಎನ್ನುವುದು ಎದ್ದು ಕಾಣಲು ನೀಲಿ ಬಣ್ಣದ ಎರಡು ಕೊರಳುಗಳಿರುವ ಗಂಡಭೇರುಂಡ ಸೇರಿಸಲಾಗಿದೆ. ಆದರೆ ಕನ್ನಡ ನಾಡ ಧ್ವಜ ಎಂದಾಗ ಸರಕಾರದ ಲಾಂಛನ ಇರುವುದರ ಬಗ್ಗೆ ಕೆಲವು ಪ್ರಶ್ನಿಸಿದ್ದಾರೆ. ಕರ್ನಾಟಕ ಸರಕಾರದ ಧ್ವಜ ಪ್ರಸ್ತಾಪಕ್ಕೆ ಕೇಂದ್ರದಿಂದ ಒಪ್ಪಿಗೆಯ ಮುದ್ರೆ ದೊರೆತರೂ ಸದ್ಯ ಇರುವ ಹಳದಿ-ಕೆಂಪು ಬಾವುಟ ಬಳಕೆ ಮಾಡುವ ಅಭಿಪ್ರಾಯ ವ್ಯಕ್ತವಾಗಿದೆ. ಇಂಥ ನಿಲುವು ಸರಿಯಲ್ಲ. ದಶಕಗಳ ಬೇಡಿಕೆ ಯಾವುದೇ ಸಮಸ್ಯೆ ಇಲ್ಲದೆ ಬಹುತೇಕ ಸಹಮತದಿಂದ ಧ್ವಜದ ಬಗ್ಗೆ ಕನ್ನಡ ಪರ ಹೋರಾಟಗಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸರಕಾರದ ವತಿಯಿಂದಲೂ ಸಮ್ಮತಿ ಸಿಕ್ಕಿದೆ.
Related Articles
Advertisement