Advertisement

Bidar; ಪರ ಭಾಷೆ ನಾಮಫಲಕ ಪುಡಿಗೊಳಿಸಿದ ಕರವೇ

04:36 PM Mar 05, 2024 | Team Udayavani |

ಬೀದರ್: ನಾಮಫಲಕ ಕನ್ನಡದಲ್ಲಿ ಅಳವಡಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಶೇ.60 ರಷ್ಟು ಕನ್ನಡ ಬಳಸದ ನಾಮಫಲಕಗಳನ್ನು ಕಿತ್ತೊಗೆಯುವುದಾಗಿ ಮೊದಲೇ ಎಚ್ಚರಿಕೆ ನೀಡಿದ್ದ ಕಾರ್ಯಕರ್ತರು, ಕನ್ನಡ ಬಾವುಟದ ಬಣ್ಣ ಬಳಿದಿದ್ದ ಬಡಿಗೆಗಳಿಂದ ಹೊಡೆದು ವಾಣಿಜ್ಯ ಮಳಿಗೆಗಳ ಅನ್ಯಭಾಷೆಯ ನಾಮಫಲಕಗಳನ್ನು ಪುಡಿಗೊಳಿಸಿದರು.

ಗಣೇಶ ಮೈದಾನದಿಂದ ಮೋಹನ್ ಮಾರ್ಕೆಟ್ ವರೆಗಿನ ಮಾರ್ಗದಲ್ಲಿ ಅನ್ಯ ಭಾಷೆಯಲ್ಲಿ ಹಾಕಲಾಗಿದ್ದ ನಾಮಫಲಕಗಳನ್ನು ಒಡೆದು ಆಕ್ರೋಶ ಹೊರ ಹಾಕಿದರು. ಜಿ.ವಿ. ಮಾಲ್‌ನ ನಾಮಫಲಕ ಕೈಯಿಂದಲೇ ಒಡೆದರು. ಮೋಹನ್ ಮಾರ್ಕೆಟ್ ಎದುರಿನ ಮುಖ್ಯರಸ್ತೆ ಮಧ್ಯೆ ಕುಳಿತು ಕೆಲಕಾಲ ರಸ್ತೆ ತಡೆ ಮಾಡಿದರು. ಆಡಳಿತ ಹಾಗೂ ಕನ್ನಡ ನಾಮಫಲಕ ಅಳವಡಿಸದ ವಾಣಿಜ್ಯ ಮಳಿಗೆಯವರ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಜಿ.ವಿ. ಮಾಲ್ ವರೆಗೆ ಮೆರವಣಿಗೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ, ರಾಜ್ಯ ಕಾರ್ಯದರ್ಶಿ ಜಗದೀಶ್ ಬಿರಾದಾರ, ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರ, ಬೀದರ್ ಉತ್ತರ ಘಟಕದ ಅಧ್ಯಕ್ಷ ಸಚಿನ್ ಬೆನಕನಳ್ಳಿ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಹೇಡೆ, ಪ್ರಮುಖರಾದ ಉದಯಕುಮಾರ ಅಷ್ಟೂರೆ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಅನಂತರ ಬಿಡುಗಡೆ ಮಾಡಿದರು.

ಎರಡನೇ ಹಂತದ ಹೋರಾಟ: ಕನ್ನಡದಲ್ಲಿ ಶೇ.60 ರಷ್ಟು ನಾಮಫಲಕ ಅಳವಡಿಕೆಗೆ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಅದಾಗಿಯೂ ವಾಣಿಜ್ಯ ಮಳಿಗೆ, ಶಿಕ್ಷಣ ಸಂಸ್ಥೆ, ಮಾಲ್, ಆಸ್ಪತ್ರೆ ಮೊದಲಾದವರು ಎಚ್ಚೆತ್ತುಕೊಳ್ಳದ ಕಾರಣ ಎರಡನೇ ಹಂತದ ಹೋರಾಟ ಆರಂಭಿಸಲಾಗಿದೆ ಎಂದು ಸೋಮನಾಥ ಮುಧೋಳ ಹೇಳಿದರು.

Advertisement

ಜಿಲ್ಲಾ ಆಡಳಿತ ಹಾಗೂ ನಗರಸಭೆ ಕನ್ನಡ ನಾಮಫಲಕ ಕಡ್ಡಾಯ ಆದೇಶ ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಈ ಸಂಬಂಧ ವ್ಯಾಪಾರಿಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಆರೋಪಿಸಿದ ಸೋಮನಥ, ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ನೆಲದಲ್ಲಿ ಕನ್ನಡ ಭಾಷೆ ಕಡೆಗಣನೆಯನ್ನು ಸಹಿಸಲಾಗದು. ಜಿಲ್ಲೆಯಾದ್ಯಂತ ಕನ್ನಡದಲ್ಲಿ ಶೇ.60 ರಷ್ಟು ನಾಮಫಲಕ ಅಳವಡಿಕೆ ಆದೇಶ ಪಾಲನೆ ಆಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಅಮಿತ್ ಶಿವಪೂಜೆ, ವಿನಾಯಕ ರೆಡ್ಡಿ ಬುಧೇರಾ, ಪ್ರಭು ಯಾಕತಪುರ, ವಿಶ್ವನಾಥ ಗೌಡ, ಮಹೇಶ ಕಾಪಸೆ, ಅಲ್ಲಾಬಕ್ಷ ಸೋನಾಡಿ, ಗೋಪಾಲ್ ಕುಲಕರ್ಣಿ, ಸುಭಾಷ್ ಗಾಯಕವಾಡ್, ಸಾಯಿನಾಥ ಕಾಂಬಳೆ ಸೇರಿದಂತೆ ವೇದಿಕೆಯ ಜಿಲ್ಲೆಯ ವಿವಿಧೆಡೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next