Advertisement

ಕತಾರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

01:21 PM Nov 28, 2020 | Adarsha |

ಕತಾರ್‌: ಇಲ್ಲಿನ ಕನ್ನಡ ಸಂಘ ತನ್ನ ವರ್ಷಾಚರಣೆಯನ್ನು ಕರ್ನಾಟಕ ರಾಜ್ಯೋತ್ಸವದ ಮೂಲಕ ಆಚರಿಸುವುದು ವಾಡಿಕೆ. ಅದರಂತೆ ಈ ಬಾರಿ ನ. 20ರಂದು ವರ್ಚುವಲ್‌ ಕಾರ್ಯಕ್ರಮದ ಮೂಲಕ ಸಂಘದ 20ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

Advertisement

ಅಂತರ್ಜಾಲ ಮೂಲಕ ನಡೆದ ಕಾರ್ಯಕ್ರಮದಲ್ಲಿ ಕತಾರ್‌ನಲ್ಲಿರುವ ಇತರೆ ಕರ್ನಾಟಕ ಮೂಲತಃ ಸಂಘಗಳು ಪಾಲ್ಗೊಂಡಿದ್ದರಿಂದ ಸಮಸ್ತ ಕತಾರ್‌ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಅಚ್ಚು-ಕಟ್ಟಾದ ನಿರ್ವಹಣೆ, ಅಂತರ್ಜಾಲ ಮುಖಾಂತರ ಕಾರ್ಯಕ್ರಮ ಪ್ರಸಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಂಘದ ಉಪಾಧ್ಯಕ್ಷ ಅನಿಲ್‌ ಬೋಳೂರ್‌ ಅವರು ಆರಂಭಿಕ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರೂಪಕಿ ಡಾ| ರಮ್ಯಾ ನಂಜಪ್ಪ ಅವರು ರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸಿದರು.

ಇತ್ತೀಚೆಗಷ್ಟೇ ಮರೆಯಾದ ಗಾನ ಗಾರುಡಿ ಪದ್ಮಭೂಷಣ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ “ಇದೇ ನಾಡು ಇದೆ ಭಾಷೆ…’ ಸ್ವಾಗತ ಗೀತೆಯೊಂದಿಗೆ ಸಂಘದ ಕಾರ್ಯಕಾರಿ ಸದಸ್ಯರು ಹಾಗೂ ಪೂರ್ವ ಅಧ್ಯಕ್ಷರು ಜತೆಯಾಗಿ ದೀಪ ಬೆಳಗಿ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.

Advertisement

ಎಲ್ಲರನ್ನೂ ಸ್ವಾಗತಿಸಿದ ಅಧ್ಯಕ್ಷ  ನಾಗೇಶ್‌ ರಾವ್‌, ಸಂಘ ಬೆಳೆಯುವಲ್ಲಿ  ಶ್ರಮಿಸಿದ ಪೂರ್ವ ಅಧ್ಯಕ್ಷರು, ಸದಸ್ಯರ ಕಾರ್ಯಗಳನ್ನು ನೆನಪಿಸಿದರು. ಜತೆಗೆ ಸಂಘ ಬೆಳೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅಲ್ಲದೇ ಕಾರ್ಯಕ್ರಮ ನಡೆಸಲು ಸಹಕರಿಸಿದ ಬಾಬುರಾಜನ್‌, ವಿ.ಎಸ್‌. ಮನ್ನಂಗಿ, ದೀಪಕ್‌ ಶೆಟ್ಟಿ ಹಾಗೂ ಸುಬ್ರಮಣ್ಯ ಹೆಬ್ಟಾಗಿಲು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸುಷ್ಮಾ ಸಂದೇಶ್‌ ಅವರು ಮುಖ್ಯ ಅತಿಥಿ ಪದ್ಮ ವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಕಿರು ಪರಿಚಯ ಮಾಡಿದರು.

ಬಳಿಕ ಆಶೀರ್ವಚನ ನೀಡಿದ ಡಾ| ಹೆಗ್ಗಡೆ, ಎಲ್ಲೇ ಇರಿ ಹೇಗೆ ಇರಿ ಕನ್ನಡಿಗರಾಗಿರಿ, ಕನ್ನಡ ಭಾಷೆಯನ್ನು  ಮನೆಯಲ್ಲಿ ಬಳಸಿ, ಉಳಿಸಿ ಎಂದು ಕರೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಿಕೊಂಡು ಬಂದಿರುವ ಕನ್ನಡ ಸಾಹಿತ್ಯ ಸಮ್ಮೇಳನ, ಸರ್ವ-ಧರ್ಮ ಸಮ್ಮೇಳನ, ಕನ್ನಡ ಗ್ರಂಥಾಲಯ ಇನ್ನಿತರ ಕನ್ನಡ ಪರ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಕಾರ್ಯ ನಿಮಿತ್ತ ಕತಾರ್‌ನಲ್ಲಿ  ನೆಲೆಸಿರುವ ಕನ್ನಡಿಗರ ಕನ್ನಡ ಪ್ರೇಮವನ್ನು ಕೊಂಡಾಡುವುದರೊಂದಿಗೆ, ಇದನ್ನು ಮುಂದುವರಿಸುವಂತೆ ಸಲಹೆ ನೀಡಿದರು.

ಬಳಿಕ ಸಂಘದ ಕಾರ್ಯದರ್ಶಿ ಮುರಳೀಧರ್‌ ರಾವ್‌, ಕಳೆದ ಒಂದು ವರ್ಷದ ಕಾರ್ಯ ಚಟುವಟಿಕೆಗಳ ವಿವರ ನೀಡಿದರು.

ವಿದ್ಯಾ ಅವರು ಗೌರವಾನ್ವಿತ ಅತಿಥಿಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರನ್ನು ಪರಿಚಯಿಸಿದರು. ಬಳಿಕ ಮಾತನಾಡಿದ ನಾಗಾಭರಣ, ಭಾಷೆ ನದಿ ಇದ್ದ ಹಾಗೆ, ಭಾಷೆಯ ಸಮ್ಮೊàಹನ ಕೇವಲ ಸಂವಹನವಾಗಿದ್ದರಷ್ಟೇ ಸಾಲದು. ಭಾಷೆ ಸಂಸ್ಕೃತಿಯನ್ನು ಬೆಳೆಸಬೇಕು ಎಂದ ಅವರು, ಕನ್ನಡ ಕಲಿಕಾ ಕಾರ್ಯಕ್ರಮದ ಮುಖಾಂತರ ಕನ್ನಡ ಕಂಪನ್ನು ಪಸರಿಸುವಲ್ಲಿ ಶ್ರಮಿಸುತ್ತಿರುವ ಕತಾರ್‌ ಕರ್ನಾಟಕ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಪ್ರಾಧಿಕಾರವು ಕೈಗೊಂಡಿರುವ “ಕನ್ನಡ ಕಾಯಕ ವರ್ಷ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರನ್ನು ಆಹ್ವಾನಿಸಿದರು.

ಲಾವಣ್ಯ ಆಚಾರ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ. ಮುರಳೀಧರ ಅವರನ್ನು ಸಭೆಗೆ ಪರಿಚಯಿಸಿದರು.

ಅನಂತರ ಮಾತನಾಡಿದ ಡಾ| ಕೆ. ಮುರಳೀಧರ, ಸಂಘದ ಕನ್ನಡ ಕಲಿಕಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೋವಿಡ್‌- 19 ಕಾಲಘಟ್ಟದಲ್ಲಿ  ಸಹಾಯ ನೀಡಿದ ಸಂಘದ ಎಲ್ಲ ಸದಸ್ಯರ ಕೊಡುಗೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಭಾರತೀಯ ದೂತವಾಸದ ಮೊದಲನೇ ಕಾರ್ಯದರ್ಶಿ ಕ್ಸೇವಿಯರ್‌ ಧನರಾಜ್‌ ಮಾತನಾಡಿ, 65ನೇ ರಾಜ್ಯೋತ್ಸವ ಆಚರಿಸುತ್ತಿರುವ ಕರ್ನಾಟಕ ಸಂಘಕ್ಕೆ ಶುಭ ಹಾರೈಸಿ, ಮಾತೃಭಾಷೆಯನ್ನು  ಕಡೆಗಣಿಸಬಾರದು. ಅದು ನಮ್ಮ ಯೋಚನೆ ಭಾಷೆ, ನಮ್ಮ ಜೀವನದ ಭಾಷೆ, ಅದನ್ನು ಬಳಸುವುದರ ಮುಖೇನ ಉಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ , ಭಾರತೀಯ ಸಾಂಸ್ಕೃತಿಕ ಕೇಂದ್ರ ಐಇಇ ಅಧ್ಯಕ್ಷ  ಮಣಿಕಂಠನ್‌ ಹಾಗೂ ICBF ಅಧ್ಯಕ್ಷ  ಬಾಬುರಾಜನ್‌ ಅವರು ಕರ್ನಾಟಕ ಸಂಘಕ್ಕೆ ಶುಭ ಹಾರೈಸಿದರು. ಬಳಿಕ “ಶ್ರೀಗಂಧ’ ರಾಜ್ಯೋತ್ಸವದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯಾ ಶೆಟ್ಟಿ  ಗಣ್ಯರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು, ಪ್ರಾಯೋಜಕರು, ನಿರೂಪಕರು, ಉತ್ಸವದಲ್ಲಿ ಪಾಲ್ಗೊಂಡ ತುಳುಕೂಟ, ಮ್ಯಾಂಗಲೋರ್‌ ಕ್ರಿಕೆಟ್‌ ಕ್ಲಬ್‌, ಬಂಟ್ಸ್‌ ಕತಾರ್‌, ಬಿಲ್ಲವಾಸ್‌ ಕತಾರ್‌, ಮ್ಯಾಂಗಲೋರ್‌ ಕಲ್ಚರಲ್‌ ಅಸೋಸಿಯೇಷನ್‌ನವರಿಗೆ ಧನ್ಯವಾದ ಸಲ್ಲಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಕರ್ನಾಟಕ ಸಂಘ ಸದಸ್ಯರಿಂದ ನಾಡಿನಲ್ಲಿ ಆಚರಿಸುವ ವಿವಿಧ ಹಬ್ಬಗಳ ವಿಶೇಷತೆ, ಸಂದೇಶವನ್ನು ಸಾರುವ ನೃತ್ಯರೂಪಕ “ಕರ್ನಾಟಕ ಹಬ್ಬ’, ಬಂಟ್ಸ್‌  ಕಲಾವಿದರಿಂದ ಕರ್ನಾಟಕದ ಇತಿಹಾಸ ಬಿಂಬಿಸುವ “ಕರುನಾಡ ತಿರುಳು’,  ತುಳುಕೂಟ ಕಲಾವಿದರಿಂದ “ತುಳುನಾಡ ಸಂಸ್ಕೃತಿ’, ಬಿಲ್ಲವಾಸ್‌ ಕತಾರ್‌ ಸದಸ್ಯರಿಂದ ರಾಜ್ಯೋತ್ಸವದ ಮಹತ್ವ ಸಾರುವ “ನಾಡ ಹಬ್ಬ – ಮನೆ ಹಬ್ಬ’, ಮ್ಯಾಂಗಲೋರ್‌ ಕ್ರಿಕೆಟ್‌ ಕ್ಲಬ್‌ ಸದಸ್ಯರಿಂದ ಹಾಸ್ಯ – ಕಿರು ನಾಟಕ “ಬದುಕು ಸಜ್ಜಿಗೆ ಬಜಿಲ್‌’ ಹಾಗೂ ಮ್ಯಾಂಗಲೋರ್‌ ಕಲ್ಚರಲ್‌ ಅಸೋಸಿಯೇಷನ್‌ ಅವರಿಂದ ಅಗಲಿದ ಹಿರಿಯ ಗಾನ ಮಾಂತ್ರಿಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆಯ್ಕೆ ನೆಚ್ಚಿನ ಕನ್ನಡ ಚಲನ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮ ಹೀಗೆ ಕರುನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕತಾರ್‌ನಲ್ಲಿ  ಕರ್ನಾಟಕ ರಾಜ್ಯೋತ್ಸವದ ಎರಡನೇ ಭಾಗ

ಕತಾರ್‌ನಲ್ಲಿ  ಕರ್ನಾಟಕ ರಾಜ್ಯೋತ್ಸವದ ಎರಡನೇ ಭಾಗ ಮುಂದಿನ ನ. 27ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಕರಾವಳಿಯ “ಅಪರಂಜಿ’ ತಂಡದ ಸದಸ್ಯರಾದ  ಅವಿನಾಶ್‌ ಕಾಮತ್‌, ಡಾ| ಅಭಿಷೇಕ್‌ ರಾವ್‌, ನಿನಾದ್‌ ನಾಯಕ್‌, ಕಲಾವತಿ ದಯಾನಂದ್‌, ತನುಶ್ರೀ ಪಿತ್ರೋಡಿ ಹಾಗೂ ಅಂಜಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next