Advertisement
ಭಾರತ ಮಾತೆಯ ಕೂಸಾದ ಕನ್ನಡಾಂಬೆಯ ನಾಡಲ್ಲಿ ಇಲ್ಲದಿರುವುದು ಏನೂ ಇಲ್ಲ. ಕನ್ನಡನಾಡು ಹಚ್ಚ ಹಸುರಿನ ದಟ್ಟವಾದ ವನಗಳಿರುವ ಗಂಧದ ಬೀಡು . ಮೈದುಂಬಿ ಹರಿಯುತ್ತಿರುವ ಕೃಷ್ಣೆ, ಶರಾವತಿ, ತುಂಗೆ, ಕಾವೇರಿಯರ ಉಗಮದ ನಾಡು. ಶಂಕರ, ರಮಾನುಜ, ವಿದ್ಯಾರಣ್ಯ, ಬಸವೇಶ್ವರರು ನೆಲೆಸಿದ ಪುಣ್ಯದ ನೆಲೆಯಿದು. ರನ್ನ, ಷಡಕ್ಷರಿ, ಪೊನ್ನ, ಪಂಪ, ಲಕ್ಷ್ಮೀಶ ಮತ್ತು ಜನ್ನರು ಹುಟ್ಟಿದ ಪುಣ್ಯಭೂಮಿಯಿದು. ನಮ್ಮ ನಾಡು ಕರ್ನಾಟಕ ನಮ್ಮ ಭಾಷೆ ಕನ್ನಡದ ಎಂದು ಎದೆ ತಟ್ಟಿ ಗರ್ವದಿಂದ ಹೇಳಲು ಇಷ್ಟು ವಿಚಾರಗಳು ಸಾಕಲ್ಲವೇ!
Related Articles
Advertisement
ನವೆಂಬರ್ 1 ಎಂದಾಕ್ಷಣ ಈಗ ಪುಟ್ಟ ಮಗು ಸಹ ಕನ್ನಡ ರಾಜ್ಯೋತ್ಸವ ಎಂದು ಸ್ವರವೆತ್ತಿ ಹೇಳುತ್ತದೆ. ಇದು ಕನ್ನಡ ನಾಡಿನ ಹೆಮ್ಮೆಯ ಹಬ್ಬ. ಇಂದು ನಾಡಗೀತೆ ಎಲ್ಲೆಡೆ ಮೊಳಗುತ್ತದೆ. ಅಂತೆಯೇ ಸರ್ಕಾರ , ವಿವಿಧ ಕ್ಷೇತ್ರದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಮಾಡುವ ಮುಖಾಂತರ ಗೌರವವನ್ನು ನೀಡುವ ಕೆಲಸವನ್ನೂ ಹಲವು ವರ್ಷಗಳಿಂದ ಮಾಡುತ್ತಿದೆ. ಸಾಹಿತ್ಯ ಲೋಕಕ್ಕೆ 8 ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಸಾಹಿತಿಗಳ ಸೇವೆ ಇಂದಿಗೂ ಅವಿಸ್ಮರಣೀಯ.
ಆದರೆ ಇಂದು ಕರ್ನಾಟಕದಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುವುದು ವಿಪರ್ಯಾಸ. ಬೇರೆ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಭಾಷೆ ನಮ್ಮದಲ್ಲ ಎನ್ನುವ ಮೂರ್ಖ ಭಾವನೆ ಇಂದಿನ ಜನರಲ್ಲಿ ಮೂಡುತ್ತಿದೆ. ಕನ್ನಡ ಗೊತ್ತಿದ್ದರೂ ಸಹ ಪರಭಾಷೆಯನ್ನೇ ಅವಲಂಬಿಸುತ್ತಿರುವುದನ್ನು ನಾವು ಖಂಡಿಸಬೇಕು. ಕನ್ನಡ ಮಣ್ಣಲ್ಲೇ ಹುಟ್ಟಿ, ಕರ್ನಾಟಕದ ನೀರನ್ನೇ ಕುಡಿದು, ಕನ್ನಡಾಂಬೆಯ ಮಡಿಲಲ್ಲೇ ಬೆಳೆದು ಕನ್ನಡ ಮಾತನಾಡಲು ಹಿಂದು ಮುಂದು ನೋಡುವ ಜನರಿದ್ದಾರೆ ಎಂಬುವುದು ಬೇಸರದ ಸಂಗತಿ.
ಅನ್ಯಭಾಷೆಯ ಪ್ರಾವೀಣ್ಯತೆ ನಮಗಿರಲಿ. ಸಂತೋಷ … ಆದರೆ ನಮ್ಮ ಭಾಷೆಯನ್ನು ಬೇರೆಯವರ ಬಳಿಯೂ ಬಿಟ್ಟು ಕೊಡುವವರು ನಾವಾಗಬಾರದು. ಬೇರೆ ರಾಜ್ಯಗಳಿಗೆ ಅಥವಾ ದೇಶಕ್ಕೆ ಹೋದರೆ ನಮ್ಮ ಮುಂದಿರುವವರಿಗೆ ಕನ್ನಡ ತಿಳಿದಿದ್ದರೂ ಸಹ ನಾವು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತೇವೆ. ಏಕೆಂದರೆ ನಮಗೆ ಕನ್ನಡ ಮಾತನಾಡಲು ಮುಜುಗರ. ಎಲ್ಲಿ ನಮ್ಮನ್ನು ನೋಡಿ ನಗುತ್ತಾರೋ ಎಂಬ ಸಂಕೋಚ. ಆಗ ನಾವು ಕನ್ನಡ ಅಷ್ಟೊಂದು ಕೀಳು ಭಾಷೆಯೇ? ನಾವು ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು. ಬೇರೆ ಭಾಷೆಯ ಜನರಿಗಾಗಿ ನಾವು ನಮ್ಮ ಭಾಷೆ ಬಿಟ್ಟು ಅವರ ಭಾಷೆಯಲ್ಲಿ ಮಾತನಾಡುವಾಗ ಅವರೇಕೆ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಕಾರಣ ಇಷ್ಟೇ ಅವರಿಗೆ ಅವರ ಭಾಷೆಯ ಮೇಲಿರುವ ಪ್ರೀತಿ, ಅವರ ನುಡಿಯ ಮೇಲಿನ ಅಭಿಮಾನ. ನಮ್ಮ ಕನ್ನಡ ಭಾಷೆಯ ಮೇಲೆ ಕನ್ನಡಿಗರಾದ ನಾವು ಈ ರೀತಿಯ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಅಳಿವು ಉಳಿವು ನಮ್ಮೆಲ್ಲರ ಕೈಯ್ಯಲ್ಲೇ ಇದೆ. ಕನ್ನಡಿಗರಾದ ನಾವು ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡಬೇಕು. ನಮ್ಮ ಉಸಿರು, ಹೃದಯದ ಬಡಿತ, ನಮ್ಮ ನರನಾಡಿಗಳು ಕನ್ನಡ ಕನ್ನಡ ಎನ್ನಬೇಕು. ಅಂತಹದ್ದೊಂದು ಭಾವನೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿದರೆ ಎಷ್ಟೊಂದು ಚಂದ ಅಲ್ವಾ !
ಲಾವಣ್ಯ. ಎಸ್
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು.