Advertisement

ಡೊಂಬಿವಲಿ ಪಲಾವಾ ಕನ್ನಡಿಗರ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

04:39 PM Dec 11, 2018 | |

ಡೊಂಬಿವಲಿ: ಪಲಾವಾ ಕನ್ನಡಿಗರ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆಯು ಡಿ. 2 ರಂದು ನಡೆಯಿತು.

Advertisement

ನಗರದ ಹಿರಿಯ ಲೇಖಕಿ, ಸಾಹಿತಿ ಡಾ| ಸುಮಾ ದ್ವಾರಕಾನಾಥ್‌ ಅವರು ಕನ್ನಡ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕದ ವೈಭವವನ್ನು ಸಾರುವ ಭಿತ್ತಿಚಿತ್ರಗಳನ್ನು ವೇದಿಕೆಗೆ ಅಳವಡಿಸಲಾಗಿತ್ತು. ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯನ್ನು ರಂಗೋಲಿಯಲ್ಲಿ ಬಿತ್ತರಿಸಿ ನಾಡು-ನುಡಿ ಪ್ರೇಮವನ್ನು ಸದಸ್ಯರು ತೋರ್ಪಡಿಸಿದರು.

ಸಂಘದ ಅನೇಕ ಸದಸ್ಯರು ನೃತ್ಯ, ಗಾಯನ, ಕಿರುನಾಟಕ ಮತ್ತು ಏಕ ಪಾತ್ರಾಭಿನಯಗಳ ಮೂಲಕ ನೆರೆದ ಕನ್ನಡಿಗರನ್ನು ರಂಜಿಸಿದರು. ಯಕ್ಷಗಾನ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಕರಾವಳಿಯ ಯುವ ಪ್ರತಿಭೆ ಅಶ್ವಿ‌ನಿ ಕೊಂಡದಕುಳಿ ಅವರನ್ನೊಳಗೊಂಡ ಯಕ್ಷಗಾನದ ತಂಡ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.  ಆಯೋಜಕರು ಮತ್ತು ಸ್ವಯಂ ಸೇವಕರ ತಂಡ ಒಂದು ತಿಂಗಳಿಗೂ ಹೆಚ್ಚು ಕಾಲ ಶ್ರಮಿಸಿ ಸಮಾರಂಭಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರು.

ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸ್ಥಳೀಯ  ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ  ರಾಜ್ಯೋತ್ಸವದಲ್ಲಿ ಭಾಗವಹಿಸಿ ಹಬ್ಬದಂತೆ ಸಂಭ್ರಮಿಸಿದರು. ಸುಮಾರು ಐನೂರು ಪ್ರೇಕ್ಷಕರು ಸಮಾರಂಭದ ಯಶಸ್ಸಿಗೆ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next