ಬೆಳ್ತಂಗಡಿ: ಯುವ ಸಮೂಹ ಜಾಗೃತಗೊಳ್ಳುವಲ್ಲಿ ಹೆತ್ತವರು ಹಾಗೂ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ವಿದ್ಯಾರ್ಥಿಗಳನ್ನು ಪಠ್ಯಕ್ಕೆ ಸೀಮಿತಗೊಳಿಸದೆ ದೈಹಿಕ ಸದೃಢತೆ ಕಾಪಾಡುವ ಸಲುವಾಗಿ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡುವ ಮೂಲಕ ನವಕರ್ನಾಟಕ ನಿರ್ಮಿಸೋಣ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ತಿಳಿಸಿದರು.
ಬೆಳ್ತಂಗಡಿ ತಾ| ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾ| ಆಡಳಿತದ ವತಿಯಿಂದ ನ. 1ರಂದು ಮಿನಿ ವಿಧಾನ ಸೌಧ ಆವರಣದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಬೆಳ್ತಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಸುಬ್ರಹ್ಮಣ್ಯ ಕೆ. ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಹಾಗೂ ಆಂಗ್ಲ ಭಾಷೆಯ ಪ್ರಾಬಲ್ಯದಿಂದ ಕನ್ನಡಿಗರಾದ ನಾವೆಲ್ಲ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ನಾಡಿನ ಪರಿಚಯವಾಗಬೇಕು. ಪ್ರವಾಸದಿಂದ ನಮ್ಮ ನಾಡು ಏನೆಂಬುದನ್ನು, ಮಾತೃ ಭಾಷೆ ಮತ್ತು ಕನ್ನಡ ಭಾಷೆಯ ಪ್ರಾಚೀನತೆಯನ್ನು ತಿಳಿಸುವ ಮೂಲಕ ಮುಂದಿನ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸಾಹಿತ್ಯ ಸಂಸ್ಕೃತಿ ಅಮರವಾಗಿಸುವ ಕನ್ನಡ ಕವಿಗಳಾಗಿ, ಸಾಹಿತಿಗಳಾಗಿ ಹೊರ ಹೊಮ್ಮಿ ಎಂದು ಶುಭಹಾರೈಸಿದರು. ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್ ಶುಭ ಹಾರೈಸಿದರು.
ಬೆಳ್ತಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ನಿವೃತ್ತ ಮೇಜರ್ ಜನರಲ್ ಎಂ.ಆರ್. ಜೈನ್, ತಾ.ಪಂ. ಸದಸ್ಯರಾದ ಗೋಪಿನಾಥ್ ನಾಯಕ್, ರಜನಿ ಕುಡ್ವ, ಗೌರಿ, ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಸಿಡಿಪಿಒ ಪ್ರಿಯಾ ಆಗ್ನೆಸ್, ಎಲ್ಲ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್ ಸ್ವಾಗತಿಸಿ, ಗೃಹರಕ್ಷಕ ದಳ ಘಟಕ ಅಧಿಕಾರಿ ಜಯಾನಂದ್ ವಂದಿಸಿದರು. ಬದನಾಜೆ ಸ. ಪ್ರೌಢಶಾಲೆ ಶಿಕ್ಷಕಿ ವೇದಾ ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ
ಎಸೆಸೆಲ್ಸಿಯ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ತಾಲೂಕಿನ ಸರಕಾರಿ ಶಾಲೆಯ 75 ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು. ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೇಕೋಟೆ, ಹೋಲಿ ರೆಡಿಮರ್ ಶಾಲೆ, ಸಂತ ತೆರೆಸ ಪ್ರೌಢಶಾಲೆ, ಚರ್ಚ್ ಸ.ಹಿ.ಪ್ರಾ.ಅನುದಾನಿತ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಶ್ರೇಯೋಭಿವೃದ್ಧಿಗೆ ಕೈಜೋಡಿಸಿ
ಸಮಾಜದಿಂದ ಪಡೆದ ಸಂಪತ್ತು ಸಮಾಜಕ್ಕೆ ಅಲ್ಪ ವಿನಿಯೋಗಿ ಸುವಂತಾದಲ್ಲಿ ದುರ್ಬಲರ ಏಳಿಗೆ ಸಾಧ್ಯ. ಈ ಬಾರಿ ನೆರೆಯಿಂದ ನಲುಗಿದ ಬೆಳ್ತಂಗಡಿ ತಾಲೂಕಿನ ಸಂತ್ರಸ್ತರ ಶ್ರೇಯೋಭಿವೃದ್ಧಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್