ದಾವಣಗೆರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಎಸ್ ಬಿ ರಂಗನಾಥ್ (83) ಗುರುವಾರ ನಿಧನರಾದರು.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಸಾರ್ಥಕ ಸೇವೆ ಸಲ್ಲಿಸುತ್ತಿದ್ದರು. ಪ್ರೌಢಶಾಲಾ ಅಧ್ಯಾಪಕ, ಮುಖ್ಯೋಪಾಧ್ಯಾಯ, ಕಿರಿಯ ಕಾಲೇಜಿನ ಪ್ರಾಚಾರ್ಯ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ, ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯೋಜಕ ಮುಂತಾದ ಹುದ್ದೆಗಳಲ್ಲಿ ತಮ್ಮ ಅನುಭವ, ಬದ್ಧತೆ ಹಾಗೂ ಅರ್ಪಣಾ ಮನೋಭಾವನೆಯಿಂದ ದುಡಿದವರು. ನಾಡಿನಾದ್ಯಂತ 270ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆನಂತರ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆ ನಿರ್ವಹಿಸಿದ್ದರು.
ಚನ್ನಗಿರಿ ತಾಲ್ಲೂಕಿನ ಸಿದ್ಧನಮಠ ಗ್ರಾಮದಲ್ಲಿ ನಾಡಿಗರ ಬಸಪ್ಪ ಮತ್ತು ಕಮಲಮ್ಮ ದಂಪತಿಗಳಿಗೆ 1941 ಜೂ. 18ರಂದು ಜನಿಸಿದರು. ಈಗ 83 ಸಾರ್ಥಕ ವಸಂತಗಳನ್ನು ಪೂರೈಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಮಹಾಲಿಂಗ ಪ್ರಶಸ್ತಿ, ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಉತ್ತಮ ಸೇವಾ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ. ಕಗ್ಗತ್ತಲೆಯ ಕಾಲ ಕೃತಿಗೆ ೨೦೨೧ರ ಶ್ರೇಷ್ಠ ಅನುವಾದ ಕೃತಿಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಪಾತ್ರವಾಗಿತ್ತು.
ಇದನ್ನೂ ಓದಿ: Raichur: ಸ್ವಾತಂತ್ರ್ಯ ದಿನಾಚರಣೆ ವೇಳೆ ಹಲ್ಲಿನಿಂದ ಕಾರು ಎಳೆದು ಗಮನ ಸೆಳೆದ ಯುವಕ