Advertisement

ಚಾಮರಾಜನಗರ ಜಿಲ್ಲೆಯ ಬಂಗಾರಾಚಾರ್ ಮತ್ತು ಡಾ.ರಾಮಕೃಷ್ಣ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

05:17 PM Oct 28, 2020 | sudhir |

ಚಾಮರಾಜನಗರ: ಜಿಲ್ಲೆಯ ಇಬ್ಬರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಯಕ್ಷಗಾನ ಕ್ಷೇತ್ರದಲ್ಲಿ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಬಂಗಾರ ಸೋಮಾಚಾರ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೂಲತಃ ರಾಮಸಮುದ್ರದವರಾದ ಹಾಲಿ ಮೈಸೂರು ವಾಸಿಯಾದ ಡಾ. ರಾಮಕೃಷ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

Advertisement

ಬಂಗಾರಾಚಾರ್ ಎಂದೇ ಕರೆಯಲ್ಪಡುವ ಬಂಗಾರ ಸೋಮಾಚಾರ್ ಅವರಿಗೆ ಈಗ 83 ವರ್ಷದ ಹರೆಯ. ವಯಸ್ಸು ಅವರ ಮೂಡಲಪಾಯ ಯಕ್ಷಗಾನ ಭಾಗವತಿಕೆ, ಮೃದಂಗ ವಾದನ, ಸೂತ್ರದ ಬೊಂಬೆಯಾಟಕ್ಕೆ ಅಡ್ಡಿ ಬಂದಿಲ್ಲ.

ಗುಂಡ್ಲುಪೇಟೆ ತಾಲೂಕು ಕಬ್ಬಹಳ್ಳಿ ಗ್ರಾಮದರಾದ ಬಂಗಾರಾಚಾರ್ ಅವರು ತಮ್ಮ 14ನೇ ವಯಸ್ಸಿನಿಂದಲೇ ಮೂಡಲಪಾಯ ಯಕ್ಷಗಾನದಲ್ಲಿ ವೇಷ ತೊಟ್ಟಿದ್ದಾರೆ. ಇದು ಅವರ ತಾತ, ತಂದೆಯಿಂದ ಬಂದ ಬಳುವಳಿ. ಅವರ ತಂದೆಯೂ ಯಕ್ಷಗಾನ ಕಲಾವಿದರು. ಚಾಮರಾಜನಗರ ಜಿಲ್ಲೆಯಂಥ ಬಯಲುಸೀಮೆಯಲ್ಲೂ ಅದರ ಇನ್ನೊಂದು ಪ್ರಕಾರವಾದ ಮೂಡಲಪಾಯ ಯಕ್ಷಗಾನ ಅಸ್ತಿತ್ವದಲ್ಲಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ, ಕೊಡಗಾಪುರ ಗ್ರಾಮಗಳಲ್ಲಿ ಮೂಡಲಪಾಯ ಯಕ್ಷಗಾನ ಕಲೆ ಈಗಲೂ ಅಸ್ತಿತ್ವ ಉಳಿಸಿಕೊಂಡಿದೆ. ಅದರ ಉಳಿವಿಗೆ ಬಂಗಾರಾಚಾರ್ ತಮ್ಮ ಇಳಿವಯಸ್ಸಿನಲ್ಲೂ ಕೊಡುಗೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ :ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ:ಗೈಡ್ ಲೈನ್ಸ್ ನಲ್ಲಿ ಏನಿದೆ?

ತಾವು ಯುವಕರಾಗಿದ್ದಾಗ ಯಕ್ಷಗಾನದ ಸ್ತ್ರೀಪಾತ್ರಗಳನ್ನು ಬಂಗಾರಾಚಾರ್ ನಿರ್ವಹಿಸುತ್ತಿದ್ದರು. ಬಳಿಕ ಭಾಗವತಿಕೆ ಮಾಡಲಾರಂಭಿಸಿದರು. ಈಗಲೂ ಭಾಗವತಿಕೆ ಮುಂದುವರೆಸಿದ್ದಾರೆ. ಕಬ್ಬಹಳ್ಳಿ ಗ್ರಾಮದ ಚಲುವರಾಯಸ್ವಾಮಿ ದೇವಾಲಯದ ಮುಂದೆ ವರ್ಷಕ್ಕೊಮ್ಮೆ, ದೀಪಾವಳಿ ಆದ 12ನೇ ದಿನ ಮೂಡಲಪಾಯ ಯಕ್ಷಗಾನ ಮೇಳ ನಡೆಯುತ್ತದೆ. (ಈ ಬಾರಿ ಕೋವಿಡ್ ಕಾರಣ ಮೇಳ ನಡೆಯುತ್ತಿಲ್ಲ).

Advertisement

ಪ್ರತಿ ವರ್ಷ ಗ್ರಾಮದ ಎಲ್ಲ ವರ್ಗದ ಜನರೂ ಈ ಮೇಳದಲ್ಲಿ ವೇಷ ಕಟ್ಟುತ್ತಾರೆ. ಬಂಗಾರಾಚಾರ್ ಅವರೇ ಭಾಗವತರು. 83ರ ಇಳಿ ವಯಸ್ಸಿನಲ್ಲೂ ಮೃದಂಗ ಹಿಡಿದು ಉತ್ಸಾಹದಿಂದ ಬಾರಿಸುತ್ತಾ ಭಾಗವತಿಕೆ ನಡೆಸುತ್ತಾರೆ. ಕಳೆದ ವರ್ಷ ಯಕ್ಷಗಾನದ ಸೇವೆಗಾಗಿ ಅವರಿಗೆ ಪಾರ್ತಿ ಸುಬ್ಬ ಪ್ರಶಸ್ತಿ ಕೂಡ ಸಂದಿದೆ. ಓರ್ವ ಪುತ್ರ ಹಾಗೂ ಐವರು ಪುತ್ರಿಯರ ಕುಟುಂಬ ಅವರದು.

ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಬಗ್ಗೆ ಬಂಗಾರಾಚಾರ್ ಅವರನ್ನು ಉದಯವಾಣಿ ಮಾತನಾಡಿಸಿದಾಗ, ಇದೆಲ್ಲ ಆ ದೇವರ ಕೃಪೆಯಿಂದ ಬಂದಿದೆ, ನನ್ನದೇನಿಲ್ಲ ಎಂದು ವಿನೀತರಾಗಿ ನುಡಿದರು. ನಮ್ಮ ತಂದೆ ನನಗೆ 14 ವರ್ಷದವನಾಗಿದ್ದಾಗಲೇ ಯಕ್ಷಗಾನಕ್ಕೆ ಕರೆತಂದರು. ಅಂದಿನಿಂದ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಯುವಕರು ಮುಂದೆ ಬಂದರೆ ಯಕ್ಷಗಾನ ಕಲಿಸುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಆರೋಪಿಗಳು 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ

ಡಾ. ಆರ್. ರಾಮಕೃಷ್ಣ: ನಗರದ ರಾಮಸಮುದ್ರದಲ್ಲಿ ಜನಿಸಿದ, ಪ್ರಸ್ತುತ ಮೈಸೂರಿನ ವಿಶ್ವೇಶ್ವರ ನಗರದಲ್ಲಿ ನೆಲೆಸಿರುವ ಡಾ. ಆರ್. ರಾಮಕೃಷ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ರಾಮಚಂದ್ರ ಅವರ ತಂದೆಯವರು ರಾಮಸಮುದ್ರದವರು. ಅವರ ತಂದೆಯವರು ಕೈಗಾರಿಕಾ ವಾಣಿಜ್ಯ ಇಲಾಖೆಯ ಉದ್ಯೋಗಿಯಾಗಿದ್ದರಿಂದಾಗಿ ರಾಮಚಂದ್ರ ಅವರ ಪ್ರಾಥಮಿಕ ಶಾಲೆಯಿಂದ ಪದವಿವರೆಗೂ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದರು. ಬಳಿಕ ಎಂ.ಎ. ಕನ್ನಡ , ಎಂ.ಎ. ಭಾಷಾ ವಿಜ್ಞಾನವನ್ನು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದರು. 1987ರಲ್ಲಿ ಕುವೆಂಪು ಶ್ರೀರಾಮಾಯಣ ದರ್ಶನಂ, ಎ ಲಿಂಗ್ವೆಸ್ಟಿಕ್ ಸ್ಟಡಿ ಎಂಬ ವಿಷಯವಾಗಿ ಪಿಎಚ್‌ಡಿ ಮಾಡಿದರು.

ನಂತರ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಭಾಷಾ ವಿಜ್ಞಾನ ಉಪನ್ಯಾಸಕರಾಗಿ, ರೀಡರ್, ಪ್ರಾಧ್ಯಾಪಕ , ಹಿರಿಯ ಪ್ರಾಧ್ಯಾಪಕ, ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಭಾಷಾ ವಿಜ್ಞಾನದ ಕುರಿತು15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 50ಕ್ಕೂ ಹೆಚ್ಚು ಸಂಶೋಧನಾ ಬರಹಗಳು, ನೂರಾರು ಲೇಖನಗಳನ್ನು ಬರೆದಿದ್ದಾರೆ. 28 ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ. ಮಾಡಿದ್ದಾರೆ. ಇವರಲ್ಲಿ 10 ಮಂದಿ ವಿದೇಶಿ ವಿದ್ಯಾರ್ಥಿಗಳಿದ್ದಾರೆ.

ಭಾಷಾ ವಿಜ್ಞಾನ ವಿಹಾರ, ಭಾಷಾ ವೀಕ್ಷಣ, ದ್ರಾವಿಡ ಭಾಷೆಗಳು, ಕೃತಕ ಭಾಷೆಗಳು, ಪ್ರಾಣಿಭಾಷೆ, ಭಾಷಾ ಸಂಪದ, ಸಾಂಸ್ಕೃತಿಕ ಮಾನವ ಶಾಸ್ತ್ರ, ಮನೆಯೊಳಗಣ ಪರಿಮಳ, ಮನದಿಂದ ಮರ್ಕಟಕೆ ದರ್ಶನವೆಂಬ ದೀಪ್ತಿ, ಕೀರ್ತಿಯ ಕಿರಣಗಳು, ಚಾಮರಾಜನಗರ ತಾಲೂಕು ದರ್ಶನ, ತಿರುಮಕೂಡಲು ನರಸೀಪುರ ತಾಲೂಕು ದರ್ಶನ ಸೇರಿ 15 ಪುಸ್ತಕಗಳನ್ನು ರಚಿಸಿದ್ದಾರೆ. ಭಾರತೀಯ ಭಾಷೆಗಳು ಎಂಬ ಪುಸ್ತಕ ಅಚ್ಚಿನಲ್ಲಿದೆ.

ಭಾಷಾ ವಿಜ್ಞಾನದಲ್ಲಿ ಕನ್ನಡದಲ್ಲಿ ಪುಸ್ತಕಗಳಿಲ್ಲದ ಕೊರತೆಯನ್ನು ಇವರ ಪುಸ್ತಕಗಳು ನೀಗಿಸಿವೆ. ಹಾಗಾಗಿ ಈ ಪುಸ್ತಕಗಳಿಗೆ ಹಲವಾರು ಬಹುಮಾನಗಳು ಸಂದಿವೆ. ರಾಮಕೃಷ್ಣ ಅವರು ಚಾಮರಾಜನಗರ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಪತ್ನಿಯೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಪುತ್ರ ಮತ್ತು ಪುತ್ರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

ಪ್ರಶಸ್ತಿ ಕುರಿತು ಉದಯವಾಣಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡ ಅವರು, ಪ್ರಶಸ್ತಿ ಬಂದಿದ್ದು, ಸಹಜವಾಗೇ ಸಂತೋಷ ತಂದಿದೆ. ಈ ಸಂತೋಷಕ್ಕೆ ಕಾರಣರಾದ ತಂದೆ ತಾಯಿಗಳು, ಗುರುಹಿರಿಯರು, ನನ್ನ ವಿದ್ಯಾರ್ಥಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ಬೆಳೆಯಲು ಇವರೆಲ್ಲರೂ ಕಾರಣರು ಎಂದು ಅವರು ಸ್ಮರಿಸಿದರು.

– ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next