ಬೆಂಗಳೂರು: 2016-2017ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ದ್ವಿತೀಯ ಹಾಗೂ ಉತ್ತರ ಕನ್ನಡ ತೃತೀಯ ಸ್ಥಾನ ಪಡೆದಿದೆ. ಬೀದರ್ ಕೊನೆ ಸ್ಥಾನ ಗಳಿಸಿದೆ.
ಪಿಯು ಫಲಿತಾಂಶ ಒಟ್ಟು ಶೇ.52.38ರಷ್ಟು ಪಡೆದಿದ್ದು, ಈ ಬಾರಿ ಫಲಿತಾಂಶದಲ್ಲಿ ಶೇ.4.82ರಷ್ಟು ಇಳಿಕೆ ಕಂಡಿದೆ. 132 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದೆ. ಒಟ್ಟು ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು 45, 983. ಪ್ರಥಮ ಶ್ರೇಣಿಯಲ್ಲಿ ಪಾಸ್ ಆದವರು 1, 92,012.
ವಿಜ್ಞಾನ ವಿಭಾಗದ ಶೇ.60.71 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ 60.09ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ. ಶೇ.60.28ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಶೇ.44.47ರಷ್ಟು ಹುಡುಗರು ಪಾಸ್ ಆಗಿದ್ದಾರೆ.
ರಾಜ್ಯದ 988 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 27ರವರೆಗೆ ಪಿಯುಸಿ ಪರೀಕ್ಷೆ ನಡೆದಿತ್ತು. ಈ ಬಾರಿ 6.50 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮಲ್ಲೇಶ್ವರದ ಪಿಯು ಇಲಾಖೆಯ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ದ್ವಿತೀಯ ಪಿಯು ಫಲಿತಾಂಶ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪಿಯು ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಹಾಜರಿದ್ದರು.
ಪಿಯು ಇಲಾಖೆ ವೆಬ್‌ಸೈಟ್ //www.pue.kar.nic.in ಅಥವಾ //karresults.nic.in ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.
ಜೂನ್ 28ರಿಂದ ಜುಲೈ 8ರವರೆಗೆ ಪೂರಕ ಪರೀಕ್ಷೆ:
ಜೂನ್ 28ರಿಂದ ಜುಲೈ 8ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ ಎಂದು ಪಿಯು ಶಿಕ್ಷಣ ಇಲಾಖೆ ತಿಳಿಸಿದ್ದು, ಉತ್ತರ ಪತ್ರಿಕೆ ನಕಲು ಪಡೆಯಲು ಮೇ 19 ಕೊನೆಯ ದಿನಾಂಕವಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನ. ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 24. ಪೂರಕ ಪರೀಕ್ಷೆಯ ಶುಲ್ಕ ಪಾವತಿಗೆ ಕೊನೆಯ ದಿನ ಜೂನ್ 23.