Advertisement
ಪಾರದರ್ಶಕ ಆಡಳಿತಕ್ಕೆ ಸಂಬಂಧಿಸಿದಂತೆ 24 ಅಂಶಗಳಿರುವ ಸಂಭಾವ್ಯ ಪ್ರಣಾಳಿಕೆ ಬಿಡುಗಡೆ ಮಾಡಿರುವ ನಟ ಉಪೇಂದ್ರ, ಇದಕ್ಕೆ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಕೇಳಿದ್ದಾರೆ. ಇವುಗಳನ್ನು ಆಧರಿಸಿ ಅಂತಿಮ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯಿ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ ನೀಡುವ ನಿಟ್ಟಿನಲ್ಲಿ ಪ್ರಜೆಗಳ ನೇರ ಸಂಪರ್ಕಕ್ಕಾಗಿ ಸರ್ಕಾರದ ಟಿವಿ ಚಾನಲ್, ಪ್ರತಿ ಇಲಾಖೆ ಮತ್ತು ಕ್ಷೇತ್ರದಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣಗಳು (ಫೇಸ್‌ಬುಕ್, ಟ್ವಿಟರ್, ವೆಬ್‌ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸುವುದು. ಪ್ರಜೆಗಳು ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ಕ್ಷೇತ್ರ ಮತ್ತು ಪ್ರದೇಶದ ಸಮಸ್ಯೆಗಳನ್ನು ಲಿಖೀತವಾಗಿ, ಫೋಟೊ, ವಿಡಿಯೋ, ಆಡಿಯೋ ಮೂಲಕ ಸಂಬಂಧಪಟ್ಟ ಇಲಾಖೆಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಅವುಗಳನ್ನು ಬಗೆಹರಿಸಲು ಕಾಲಮಿತಿ ನಿಗದಿಪಡಿಸುವುದು. ನಿಗದಿತ ಸಮಯದಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ತಕ್ಷಣವೇ ಮೇಲ್ಮಟ್ಟದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ (ಶಾಸಕರು) ಅದನ್ನು ವರ್ಗಾಯಿಸಿ ಬಗೆಹರಿಸಲು ಕ್ರಮ ಕೈಗೊಳ್ಳುವುದು. ಈ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಕಚೇರಿವರೆಗೂ ವಿಸ್ತರಿಸುವುದು.
Related Articles
Advertisement
ಸರ್ಕಾರಿ ನೌಕರರಿಗೆ ಅವರ ಸಂಪೂರ್ಣ ಮಾಹಿತಿಯನ್ನೊಳಗೊಂಡ ಬ್ಯಾಡ್ಜ್, ಏಕರೂಪದ ಸಮವಸ್ತ್ರ, ಎಲ್ಲಾ ಸರ್ಕಾರಿ ಕಚೇರಿ ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ, ವೈಫೈ, ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಆಡಳಿತವನ್ನು ಜನರಿಗೆ ವೀಕ್ಷಿಸಲು ಅವಕಾಶ ಕಲ್ಪಿಸುವುದು, ವಿಧಾನಸೌಧದಲ್ಲಿ ನಡೆಯುವ ಪ್ರತಿ ಚಟುವಟಿಕೆಗಳನ್ನೂ ದೃಶ್ಯಮಾಧ್ಯಮ ಮತ್ತು ದೊಡ್ಡ ಪರದೆಗಳಲ್ಲಿ ಬಿತ್ತರಿಸಿ ಅದರ ಆಧಾರದ ಮೇಲೆ ಚರ್ಚೆಗೆ ಅವಕಾಶ ನೀಡಲಾಗುವುದು.
ಅಧಿವೇಶನ ಮತ್ತು ಸಭೆಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ದಾಖಲೆಗಳಂದಿಗೆ ಚರ್ಚೆ ನಡೆಸಬೇಕು ಮತ್ತು ಈ ಸಭೆಗಳನ್ನು ನೇರ ಪ್ರಸಾರದ ಮೂಲಕ ಜನ ವೀಕ್ಷಿಸಬೇಕು. ಟೆಂಡರ್ ವಿಚಾರಗಳು ಆನ್‌ಲೈನ್‌ನನ್ನೇ ನಡೆದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪರಸ್ಪರ ನೋಡಲು ಅವಕಾಶವಿರಬಾರದು. ಟೆಂಡರ್ ಪ್ರಕ್ರಿಯೆ ಕೂಡ ಆನ್‌ಲೈನ್‌ನಲ್ಲಿ ನೇರ ಪ್ರಸಾರವಾಗಬೇಕು. ಎಲ್ಲ ಜನ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ತಮ್ಮ ದೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂಗಡವಾಗಿ ಅವರವರ ಸಾಮಾಜಿಕ ಜಾಲತಾಣಗಳಲ್ಲಿ, ಅವರವರ ಕ್ಷೇತ್ರದ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.
ಪ್ರಜೆಗಳು ಹಾಗೂ ಚುನಾಯಿತ ಸದಸ್ಯರ, ಸರ್ಕಾರೀ ಅಧಿಕಾರಿಗಳ ನಡುವಿನ ನೇರ ಸಂವಾದಗಳು ತಿಂಗಳಿಗೊಮ್ಮೆ ಅವರವರ ಕ್ಷೇತ್ರಗಳಲ್ಲಿ ಟಿವಿ ಚಾನಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ದೃಶ್ಯ ದಾಖಲೆಗಳೊಂದಿಗೆ ಪ್ರಸಾರ ಮಾಡುವುದು. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯಲ್ಲೂ ಪಾರದರ್ಶಕತೆ ಕಾಪಾಡಲು ಪ್ರಕ್ರಿಯೆಯನ್ನು ಜನರಿಗೆ ಲಭ್ಯವಾಗುವಂತೆ ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸುವುದು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮಾಡುವ ವೆಚ್ಚಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸುವುದು. ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲಾದ ಪಿಂಚಣಿಗಳಿಂದ ಸಂಗ್ರಹವಾಗುವ ಹಣವನ್ನು ವೃದ್ಧಾಶ್ರಮ ಹಾಗೂ ವಸತಿ ರಹಿತರ ಅಭಿವೃದ್ಧಿಗೆ ಬಳಸುವುದು. ಯಾವುದೇ ರೀತಿಯ ಲೋಕಾರ್ಪಣಾ ಸಮಾರಂಭ, ಸಂಭ್ರಮ, ಉದ್ಗಾಟನೆಗಳನ್ನು ನಡೆಸುವುದು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸುವುದು. ಕರ್ನಾಟಕ ಶಾಸಕಾಂಗ ವೇತನಗಳು, ಪಿಂಚಣಿ ಮತ್ತು ಭತ್ಯೆ ಕಾಯ್ದೆ ಸರಳೀಕರಿಸುವುದು ಹಾಗೂ ಈ ಎಲ್ಲಾ ಅಂಶಗಳನ್ನು ಜಾರಿಗೊಳಿಸಲು ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಸಂಭಾವ್ಯ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.
ನೀವೂ ಸಲಹೆ ನೀಡಿಸಂಭಾವ್ಯ ಪ್ರಣಾಳಿಕೆಗೆ ಸಲಹೆ ಮತ್ತು ಅಭಿಪ್ರಾಯ ನೀಡಲು ಮೊಬೈಲ್- 9845396204, 9845396804 ಮತ್ತು ideaskpjpuppi@ gmail.comಗೆ ಕಳುಹಿಸಬಹುದು.