ಗದಗ:ಮಹದಾಯಿ ನದಿ ಬಿಕ್ಕಟ್ಟು ಸೃಷ್ಟಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ಮಹದಾಯಿ ವಿವಾದಕ್ಕೆ ಭಾರತೀಯ ಜನತಾ ಪಕ್ಷ ಬದ್ಧವಾಗಿದೆ. ಆದರೆ ನಾವು(ಬಿಜೆಪಿ) ನಿಮ್ಮಂತೆ ಗೊಂದಲ ಸೃಷ್ಟಿ ಮಾಡುವುದಿಲ್ಲ. ಎಲ್ಲರನ್ನೂ ಒಂದು ಕಡೆ ಕೂರಿಸಿ ಪರಿಹಾರ ಒದಗಿಸಿ ಕೊಡುತ್ತೇವೆ, ಈ ಸಮಸ್ಯೆ ಮುಂದಿನ ಪೀಳಿಗೆವರೆಗೆ ಮುಂದುವರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಗದಗ ಜನತೆಗೆ ಭರವಸೆ ನೀಡಿದ್ದಾರೆ.
ಶನಿವಾರ ಗದಗ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದ ಸೃಷ್ಟಿಸಿದ್ದು ಕಾಂಗ್ರೆಸ್. ಮಹದಾಯಿ ಸ್ವಚ್ಛ ನೀರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿತ್ತು ಎಂದು ಆರೋಪಿಸಿದರು.
ಸೋನಿಯಾ ವಿರುದ್ಧ ವಾಗ್ದಾಳಿ;
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ್ದೇನು ಎಂದು ಪ್ರಶ್ನಿಸಿದ ಮೋದಿ, 2007ರಲ್ಲಿ ನಿಮ್ಮ ಸೋನಿಯಾ ಮೇಡಂ ಗೋವಾದ ಮಡಗಾಂವ್ ನಲ್ಲಿ ಮಾತನಾಡುತ್ತ ಏನು ಹೇಳಿದ್ದರು ಗೊತ್ತಾ? ಆಗ ನೀವು(ಸಿದ್ದರಾಮಯ್ಯ) ಕಾಂಗ್ರೆಸ್ ಪಕ್ಷದಲ್ಲಿ ಇರಲಿಲ್ಲ. ಪಕ್ಷ ಬದಲಿಸುವುದರಲ್ಲಿ ನೀವು ಸಿದ್ಧಹಸ್ತರಲ್ಲವೇ? ಎಂದು ಟೀಕಿಸಿದರು.
ಮಹದಾಯಿ ಹನಿ ನೀರು ಕರ್ನಾಟಕಕ್ಕೆ ಸಿಗದಂತೆ ಮಾಡುವುದು ನಮ್ಮ ಬದ್ಧತೆ ಎಂದು ಸೋನಿಯಾಜೀ ಹೇಳಿದ್ದರು. ಆದರೆ ಗೋವಾದಲ್ಲಿ ಈಗ ಕಾಂಗ್ರೆಸ್ ಪಕ್ಷ ಮಾಯವಾಗಿದೆ. ಅದಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿಲುವು ಬದಲಿಸಿದೆ ಎಂದು ದೂರಿದರು.
ವಿವಾದವನ್ನು ಬಗೆಹರಿಸದೇ ನ್ಯಾಯಮಂಡಳಿ ರಚಿಸಿದ್ದು ಕಾಂಗ್ರೆಸ್ ಪಕ್ಷ. ಮಹದಾಯಿ ನೀರು ಕರ್ನಾಟಕಕ್ಕೆ ಸಿಗುವುದಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷ ಬದ್ಧ ಎಂದು ಹೇಳಿದ್ದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.