Advertisement

ಆಡಳಿತ ವಿರೋಧಿ ಸುನಾಮಿಯ ತಡೆಯುವುದೇ ಹೊಸ ನಾಣ್ಯದ ಚಲಾವಣೆ?

10:13 PM May 05, 2023 | Team Udayavani |

ಬೈಂದೂರು: ಅನುಭವಿ ಮತ್ತು ಹೊಸಮುಖಗಳ ನಡುವಿನ ಕಾದಾಟವು ಈ ಕ್ಷೇತ್ರದ ರೋಚಕತೆಯನ್ನು ಹೆಚ್ಚಿಸಿದೆ. ಕಳೆದ 4 ಚುನಾವಣೆಗಳಲ್ಲಿ ಹಾವು-ಏಣಿ ಆಟದಂತಿದ್ದ ಬೈಂದೂರಲ್ಲಿ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ.

Advertisement

ದಿನೇ ದಿನೇ ಕಣದ ಚಿತ್ರಣ ಬದಲಾಗುತ್ತಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬಿಜೆಪಿಯಿಂದ ಹೊಸ ಮುಖ, ಆರೆಸ್ಸೆಸ್‌ ಕಟ್ಟಾಳು ಗುರುರಾಜ್‌ ಗಂಟಿಹೊಳೆ ಸೆಣಸುತ್ತಿದ್ದಾರೆ.

ಇಲ್ಲಿ 2004 ರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ಗೆ ಸೋಲು-ಗೆಲುವು ಹಾವು-ಏಣಿ ಆಟದಂತಿದೆ. 2004ರಲ್ಲಿ ಕಾಂಗ್ರೆಸ್‌, 2008ರಲ್ಲಿ ಬಿಜೆಪಿ, 2013ರಲ್ಲಿ ಕಾಂಗ್ರೆಸ್‌ ಹಾಗೂ 2018ರಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಈ ಕಾರಣಕ್ಕೂ ಈ ಬಾರಿಯ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತೆ ಗೆದ್ದರೆ ಸತತ ಗೆಲುವಿನ ಇತಿಹಾಸ ನಿರ್ಮಿಸಿದ ಕೀರ್ತಿ. ಕಾಂಗ್ರೆಸ್‌ ಗೆದ್ದರೆ ಗೆಲುವಿನ ಹಾವು ಏಣಿ ಆಟವನ್ನು ಮುಂದುವರಿಸಿದ ಹೆಗ್ಗಳಿಕೆ.

ಏಳನೇ ಬಾರಿಗೆ ಸ್ಪರ್ಧೆ
ಗೋಪಾಲ ಪೂಜಾರಿ 6 ಬಾರಿ ಸ್ಪರ್ಧಿಸಿದ್ದು, 4 ಬಾರಿ ಶಾಸಕರಾಗಿದ್ದು, 2 ಬಾರಿ ಸೋತಿದ್ದರು. ಇದು ಏಳನೇ ಬಾರಿಯ ಸ್ಪರ್ಧೆ. ಇದು ನನ್ನ ಕೊನೇ ಚುನಾವಣೆಯಾಗಿದ್ದು, ಕ್ಷೇತ್ರದ ಮತದಾರರು ಕೈ ಹಿಡಿಯುವರು ಎಂಬ ವಿಶ್ವಾಸದಲ್ಲಿದ್ದಾರೆ. ಸ್ಟಾರ್‌ ಪ್ರಚಾರಕರಿಗಿಂತ ಬೂತ್‌ ಮಟ್ಟದ, ಮನೆ-ಮನೆ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟರಿಗೆ ಬಿಜೆಪಿ ಟಿಕೆಟ್‌ ಕೊಡದಿರುವ ಪರಿಣಾಮ ಪ್ರಚಾರದಲ್ಲಿ ಭಾಗಿಯಾಗದಿರುವುದು, ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಬಾಬು ಹೆಗ್ಡೆ ಮತ್ತಿತರ ಪ್ರಮುಖರು ಕಾಂಗ್ರೆಸ್‌ಗೆ ಸೇರಿರುವುದು ಎಷ್ಟರಮಟ್ಟಿಗೆ ಗೋಪಾಲ ಪೂಜಾರಿ ಅವರಿಗೆ ಲಾಭ ತಂದೀತೆಂಬ ಕೌತುಕವಿದೆ.

ಮೊದಲ ಸ್ಪರ್ಧೆ
ಗುರುರಾಜ್‌ ಗಂಟಿಹೊಳೆ ಅವರದ್ದು ಇದು ಚೊಚ್ಚಲ ಸ್ಪರ್ಧೆ. ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ, ಉಪಾಧ್ಯಕ್ಷರಾಗಿದ್ದ, ಆರೆಸ್ಸೆಸ್‌ ಕಟ್ಟಾಳುವಾಗಿದ್ದು, 10 ವರ್ಷಗಳ ಕಾಲ ಪ್ರಚಾರಕರಾಗಿ ಶ್ರಮಿಸಿದ್ದರು. ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಹಿಂದಿನ ಅವಧಿಯಲ್ಲಾದ ಅಭಿವೃದ್ಧಿ, ಯುವಕ ಎಂಬ ಧನಾತ್ಮಕ ಅಂಶ, ಸಂಘ ಪರಿವಾರದ ಬೆಂಬಲ ಒಂದು ಹಂತದ ಶಕ್ತಿ ತುಂಬಿದ್ದರೆ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗ ದಳ ವಿಷಯದಂಥ ಸಂಗತಿಯೂ ಬಿಜೆಪಿಯ ಗೆಲುವಿಗೆ ಎಷ್ಟರಮಟ್ಟಿಗೆ ಪೂರಕ ವಾತಾವರಣ ಕಲ್ಪಿಸಬಹುದು ಎಂಬ ಲೆಕ್ಕಾಚಾರ ಪಕ್ಷದ ಪಡಸಾಲೆಯಲ್ಲಿ ನಡೆಯುತ್ತಿದೆ.

Advertisement

ಕೊನೆ- ಮೊದಲ ಚುನಾವಣೆ…
ಕೊನೆಯ ಹಾಗೂ ಮೊದಲ ಚುನಾವಣೆ ಎಂಬ ಮಾತೇ ಹೆಚ್ಚು ಸದ್ದು ಮಾಡುತ್ತಿದೆ. ಗೋಪಾಲ ಪೂಜಾರಿ ಕೊನೆಯ ಚುನಾವಣೆ ಹೊಸ್ತಿಲಲ್ಲಿದ್ದರೆ, ಬಿಜೆಪಿ ಗುರುರಾಜ್‌ ಗಂಟಿಹೊಳೆ 2013 ರ ಚುನಾವಣೆಯಲ್ಲದೇ, ಅದಕ್ಕೂ ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಪರ ಕಾರ್ಯನಿರ್ವಹಿಸಿದ್ದರೂ, ಅಭ್ಯರ್ಥಿಯಾಗಿ ಮೊದಲ ಚುನಾವಣೆಯ ಹೊಸ್ತಿಲಲ್ಲಿದ್ದಾರೆ. ಹಾಗಾಗಿ ಮತದಾರರು ಗೌರವ ವಿದಾಯಕ್ಕೆ ಮನ್ನಣೆ ನೀಡುವರೋ, ಹೊಸ ಮುಖಕ್ಕೆ ಅದ್ದೂರಿ ಸ್ವಾಗತ ಕೋರುವರೋ ಕಾದು ನೋಡಬೇಕಿದೆ.

ಬಿಜೆಪಿಯು ಬಂಟ ಸಮುದಾಯದ ಗುರುರಾಜ್‌ ಗಂಟಿಹೊಳೆ ಹಾಗೂ ಕಾಂಗ್ರೆಸ್‌ ಬಿಲ್ಲವ ಸಮುದಾಯದ ಗೋಪಾಲ ಪೂಜಾರಿಯವರಿಗೆ ಮಣೆ ಹಾಕಿದೆ. ಇಲ್ಲಿ ಬಿಲ್ಲವ ಹಾಗೂ ಬಂಟ ಮತದಾರರೇ ಹೆಚ್ಚಿದ್ದು, ಇಬ್ಬರ ಗೆಲುವಿನಲ್ಲೂ ನಿರ್ಣಾಯಕರಾಗಬಲ್ಲರು. ದೇವಾಡಿಗರು, ಖಾರ್ವಿ, ಎಸ್ಸಿ-ಎಸ್ಟಿ, ಮೊಗವೀರರು, ಅಲ್ಪಸಂಖ್ಯಾಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೂ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಣದಲ್ಲಿರುವ ಅಭ್ಯರ್ಥಿಗಳು 9
– ಗುರುರಾಜ್‌ ಗಂಟಿಹೊಳೆ(ಬಿಜೆಪಿ)
– ಕೆ. ಗೋಪಾಲ ಪೂಜಾರಿ(ಕಾಂಗ್ರೆಸ್‌)
– ಮನ್ಸೂರ್‌ ಇಬ್ರಾಹಿಂ(ಜೆಡಿಎಸ್‌)
– ಪ್ರಸಾದ್‌(ಉತ್ತಮ ಪ್ರಜಾಕೀಯ)
– ಸಿಎ ರಮಾನಂದ ಪ್ರಭು(ಆಪ್‌)
– ಕೊಲ್ಲೂರು ಮಂಜುನಾಥ ನಾಯ್ಕ(ರಾಷ್ಟಿÅàಯ ಸಮಾಜ ದಳ)
– ಚಂದ್ರಶೇಖರ ಜಿ.(ಪಕ್ಷೇತರ)
– ಶ್ಯಾಮ ಬಿ.(ಪಕ್ಷೇತರ)
– ಎಚ್‌.ಸುರೇಶ್‌ ಪೂಜಾರಿ(ಪಕ್ಷೇತರ)

ಲೆಕ್ಕಾಚಾರ ಏನು?
ಕಳೆದ ಬಾರಿ ಬಿಜೆಪಿಯನ್ನು ಹಿಂದುತ್ವ, ಮೋದಿ ಅಲೆ, ಪರೇಶ್‌ ಮೇಸ್ತ ಪ್ರಕ ರ ಣ ಗೆಲ್ಲಿಸಿದ್ದವು. ಈ ಬಾರಿ ಆಡಳಿತ ವಿರೋಧಿ ಆಲೆಗೆ ಹೊಸ ನಾಣ್ಯದ ಚಲಾವಣೆ ಉತ್ತರವಾಗಬಹುದೇ
ಕಾದು ನೋಡಬೇಕಿದೆ.`

–  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next