ಮಂಗಳೂರು: ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟಿದ್ದ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಜಯದ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಹೊರತುಪಡಿಸಿ ಕಣದಲ್ಲಿದ್ದ ಇತರರು ಕಳೆಕುಂದಿಸಿಕೊಂಡಿದ್ದಾರೆ.
ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಮುಖಾಮುಖೀ ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಈ ಬಾರಿ ಮಂಗಳೂರು ನಗರ ಉತ್ತರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಮೊದಿನ್ ಬಾವಾ ಕೂಡ ಕ್ಷೇತ್ರದಲ್ಲಿ 5,256 ಮತಗಳನ್ನು ಗಳಿಸುವುದರಷ್ಟರಲ್ಲೇ ಯಶಸ್ವಿಯಾದರು.
ಮಂಗಳೂರು ಕ್ಷೇತ್ರದಲ್ಲಿ ಎಸ್‌ಡಿಪಿಐಯ ರಿಯಾಝ್ ಪರಂಗಿಪೇಟೆಯ ಅವರು 15,054 ಮತಗಳನ್ನು ಪಡೆಯಲು ಯಶಸ್ವಿಯಾಗಿದ್ದರೂ ಕ್ಷೇತ್ರದ ವಿಜಯಿ ಅಭ್ಯರ್ಥಿಯ ಮತಗಳ ಮೇಲೆ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ಬಂಟ್ವಾಳದಲ್ಲಿ ಎಸ್‌ಡಿಪಿಐನ ಇಲ್ಯಾಸ್ ಮುಹಮ್ಮದ್ ತುಂಬೆ 5,436 ಮತಗಳನ್ನು ಪಡೆದುಕೊಂಡರು. ಬೆಳ್ತಂಗಡಿಯಲ್ಲಿ ಎಸ್‌ಡಿಪಿಐನ ಅಕºರ್ ಬೆಳ್ತಂಗಡಿ ಅವರು 2,513 ಮತಗಳನ್ನು ಪಡೆದಿದ್ದರೆ, ಮೂಡುಬಿದಿರೆಯಲ್ಲಿ ಎಸ್‌ಡಿಪಿಐನ 3,617 ಹಾಗೂ ಜೆಡಿಎಸ್‌ನ ಡಾ| ಅಮರಶ್ರೀ ಅವರು 1,533 ಮತಗಳಿಗೆ ತೃಪ್ತಿ ಪಟ್ಟಿದ್ದಾರೆ. ಪುತ್ತೂರಿನಲ್ಲಿ ಎಸ್‌ಡಿಪಿಐನ ಶಾಫಿ ಬೆಳ್ಳಾರೆ 2,788 ಮತಗಳನ್ನು ಪಡೆದಿದ್ದಾರೆ.
ಇನ್ನುಳಿದಂತೆ ಕಣದಲ್ಲಿದ್ದ ಆಪ್ ಹಾಗೂ ಪಕ್ಷೇತರರು ಸಹಿತ ಇತರ ಯಾವುದೇ ಅಭ್ಯರ್ಥಿಗಳ ಸ್ಪರ್ಧೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.
ಸುಳ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಎಲ್. ವೆಂಕಟೇಶ್ 1,850, ಆಪ್‌ನ ಸುಮನ ಬೆಳ್ಳಾರ್‌ಕರ್ 1,587 ಮತ ಪಡೆದಿದ್ದಾರೆ. ಕಳೆದ ಬಾರಿ ಬೆಳ್ತಂಗಡಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸುಮತಿ ಎಸ್. ಹೆಗ್ಡೆ ಈ ಬಾರಿ ಮಂಗಳೂರು ದಕ್ಷಿಣದಿಂದ ಸ್ಪರ್ಧಿಸಿ 709 ಮತಗಳಿಗೆ ತೃಪ್ತಿ ಪಟ್ಟಿದ್ದಾರೆ. ಇತರ ಯಾರೂ ಮೂರಂಕಿಯನ್ನು ದಾಟುವಲ್ಲಿ ಯಶಸ್ವಿಯಾಗಿಲ್ಲ.