Advertisement

ಕರುನಾಡಿನ ಮತೋತ್ಸವಕ್ಕೆ ತರಹೇವಾರಿ ಮೆರುಗು

02:40 AM May 11, 2023 | Team Udayavani |

ಕರ್ನಾಟಕ ವಿಧಾನಸಭೆಯ ಮತದಾನ ಮುಕ್ತಾಯವಾಗಿದೆ. ಈ ಬಾರಿಯ ಚುನಾವಣೆ ಹಲವಾರು ವಿಶೇಷಗಳಿಗೂ ಸಾಕ್ಷಿಯಾಯಿತು. ಅದರಲ್ಲೂ ಬುಧವಾರ ವಿವಾಹಕ್ಕೆ ಉತ್ತಮ ದಿನವಾಗಿದ್ದರಿಂದ ಹಲವಾರು ಕಡೆಗಳಲ್ಲಿ ವಿವಾಹ ಕಾರ್ಯಕ್ರಮಗಳೂ ನಡೆದಿದ್ದವು. ಆದರೆ ಮದುವೆಯಾದ ವಧು-ವರ ಮತವನ್ನು ತಪ್ಪಿಸಿಕೊಳ್ಳದೇ ವಿವಾಹದ ದಿರಿಸಿನಲ್ಲೇ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

Advertisement

ಶತಾಯುಷಿಗಳೂ ಮತದಾನ ಮಾಡಿ, ಯುವಕರನ್ನೂ ನಾಚಿಸಿದರು. ಮತಗಟ್ಟೆಯಲ್ಲೇ ಮಗುವಿಗೆ ಜನನ, ಕಾಲಿನಲ್ಲೇ ಓಟು ಹಾಕಿದ್ದು ವಿಶೇಷ.

ಧರ್ಮಸ್ಥಳದಲ್ಲಿ ಮದುವೆ: ಸಕಲೇಶಪುರದಲ್ಲಿ ಮತ ಚಲಾವಣೆ

ಹಾಸನ: ಧರ್ಮಸ್ಥಳದಲ್ಲಿ ಬುಧವಾರ ಬೆಳಗ್ಗೆ ವಿವಾಹವಾದ ಮದುಮಗನೊಬ್ಬ ವಧುವಿನೊಂದಿಗೆ ಸಕಲೇಶಪುರಕ್ಕೆ ಬಂದು ಮತ ಚಲಾವಣೆ ಮಾಡಿದ್ದಾರೆ. ಸಕಲೇಶಪುರದ ಮಹೇಶ್ವರಿ ನಗರ ನಿವಾಸಿ ರೋಹಿತ್‌ ಅವರು ಬುಧವಾರ ಬೆಳಗ್ಗೆ ಪಟ್ಟಣದ ಧರ್ಮಸ್ಥಳದಲ್ಲಿ ನಂದಿನಿ ಎಂಬ ಯುವತಿಯನ್ನು ಮದುವೆಯಾಗಿ ಬಂದು ಸಕಲೇಶಪುರದ ಮತಗಟ್ಟೆ 85 ರಲ್ಲಿ ಹಕ್ಕು ಚಲಾವಣೆ ಮಾಡಿದರು. ರೋಹಿತ್‌ ಪತ್ನಿ ನಂದಿನಿ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಮತದಾನ ಮಾಡಿದರು.

ಮದುವೆಯಾಗಿ ಬಂದು ಓಟು ಹಾಕಿದರು…

Advertisement

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮುತ್ತಯ್ಯ ಬಡಾವಣೆ ನಿವಾಸಿ ನಾಗೇಂದ್ರ ಮತ್ತು ಗೀತ ದಂಪತಿ ಪುತ್ರ ಕೆ.ಎನ್‌.ಬಿಪಿನ್‌ ಹಾಗೂ ಕುಳಲು ಮನೆ ಬಂಟ್ವಾಳ ತಾಲೂಕು ವಾಸಿ ಬೇಬಿ ಮತ್ತು ಪುರುಷೋತ್ತಮ ದಂಪತಿ ಪುತ್ರಿ ಪಿ.ಅಕ್ಷತಾ ನವ ಜೋಡಿಗಳು ಕೊಡವ ಸಮಾಜ ಭವನದ ವಿವಾಹ ಮಂಟಪದಿಂದ ನೇರವಾಗಿ ಅದೇ ಉಡುಪುಗಳಲ್ಲಿ ಪಟ್ಟಣದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಮತಗಟ್ಟೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

ಬಳ್ಳಾರಿ: ಮತದಾನ ಮಾಡಲು ಬಂದಿದ್ದ ಗರ್ಭಿಣಿಯೊಬ್ಬರು ಮತಗಟ್ಟೆ ಆವರಣದಲ್ಲೇ ಮಗುವಿಗೆ ಜನ್ಮನೀಡಿದ ಘಟನೆ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ನಡೆದಿದೆ. ಕಂಪ್ಲಿ ಕ್ಷೇತ್ರ ವ್ಯಾಪ್ತಿಯ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ಮತದಾನಕ್ಕೆ ಬಂದ ಸಂದರ್ಭದಲ್ಲೇ ಮಣಿಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪಕ್ಕದಲ್ಲೇ ಇದ್ದ ಕೊಠಡಿಗೆ ಕರೆದುಕೊಂಡು ಹೋಗಿ ಆರೈಕೆ ಮಾಡಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಹೆರಿಗೆಯಾದ ಬಳಿಕ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಮತ ಚಲಾಯಿಸಿ ಹಸೆಮಣೆ ಏರಿದ ಯುವತಿ

ಚಿಕ್ಕಮಗಳೂರು/ಮೂಡಿಗೆರೆ: ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಮಾಕೋನಹಳ್ಳಿ ಮತಗಟ್ಟೆಗೆ ಮದುಮಗಳೊಬ್ಬಳು ಆಗಮಿಸಿ ತಮ್ಮ ಹಕ್ಕು ಚಲಾಯಿಸಿ ಬಳಿಕ ಹಸೆಮಣೆ ಏರಿದ್ದಾರೆ. ಮೂಡಿಗೆರೆ ತಾಲೂಕು ಚಂದ್ರಾಪುರದ ಪದ್ಮೇಗೌಡ ಅವರ ಮಗಳು ಸುಶ್ಮಿತಾ ವಿವಾಹ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ನಿಗದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಮದುವೆ ಅಲಂಕಾರದಲ್ಲಿಯೇ ಮಾಕೋನಹಳ್ಳಿ ಮತಗಟ್ಟೆ ಸಂಖ್ಯೆ 181ಕ್ಕೆ ಆಗಮಿಸಿ ಮತದಾನ ಮಾಡಿದರು. ಬಳಿಕ ಮದುವೆ ಮಂಟಪಕ್ಕೆ ಆಗಮಿಸಿ ಹಸೆಮಣೆ ಏರಿದರು.

ಕಾಲಿನಲ್ಲಿ ಮತ ಹಾಕಿದ ಅಂಗವಿಕಲ ಮಹಿಳೆ

ಬಳ್ಳಾರಿ: ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕೊಳಗಲ್ಲು ಗ್ರಾಮದ ಎರಡೂ ಕೈಗಳಿಲ್ಲದ ಮುಸ್ತಫಾ ಎಂಬ ಅಂಗವಿಕಲ ಮಹಿಳೆ ಗ್ರಾಮದ ಮತಗಟ್ಟೆಯಲ್ಲಿ ತನ್ನ ಕಾಲಿನಿಂದ ಮತದಾನ ಮಾಡಿದರು. ಕೈಗಳಿಲ್ಲದ ಹಿನ್ನೆಲೆಯಲ್ಲಿ ಚುನಾವಣ ಅಧಿಕಾರಿಗಳು ಕಾಲಿನ ಹೆಬ್ಬೆರಳಿಗೆ ಶಾಹಿ ಹಾಕಿದರು. ಬಳಿಕ ಮತಯಂತ್ರದಲ್ಲಿ ಕಾಲಿನಿಂದ ಬಟನ್‌ ಒತ್ತಿ ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ವಧು-ವರ

ಚಾಮರಾಜನಗರ: ಹಸೆಮಣೆಯೇರಿದ ನವ ವಧು ಮದುವೆಯ ಉಡುಗೆಯಲ್ಲೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಪ್ರಸಂಗ ತಾಲೂಕಿನ ಮೇಲಾಜಿಪುರದಲ್ಲಿ ನಡೆಯಿತು.

ತಾಲೂಕಿನ ಮೇಲಾಜಿಪುರದ ಮಾದಲಾಂಬಿಕಾ (ಪುಟ್ಟಿ) ಹಾಗೂ ನಂಜನಗೂಡು ತಾಲೂಕಿನ ಕಾರೇಪುರದ ಕೆ.ಎಸ್‌.ಮಂಜುನಾಥ್‌ರ ವಿವಾಹ ಬುಧವಾರ ತಾಲೂಕಿನ ಪುಣ್ಯದಹುಂಡಿಯ ಕಲ್ಯಾಣ ಮಂಟ ಪದಲ್ಲಿ ನಡೆಯಿತು. ಹಸೆಮಣೆಯೇರಿದರೂ ಮತದಾನದ ಕರ್ತವ್ಯ ಮರೆಯದ ನವ ವಧು-ವರ ಮದುವೆಯಾದ ಬಳಿಕ ಮೇಲಾಜಿಪುರದ ಮತಗಟ್ಟೆಗೆ ಆಗಮಿಸಿದರು. ವಧು ಮಾದಲಾಂಬಿಕೆಯ ಮತ ಈ ಮತಗಟ್ಟೆಯಲ್ಲಿತ್ತು. ವಧು ಇಲ್ಲಿ ಮತ ಚಲಾಯಿಸಿದರು. ವರ ಮಂಜುನಾಥ್‌ರ ಮತ ನಂಜನಗೂಡು ತಾಲೂಕು ಕಾರೇಪುರದಲ್ಲಿತ್ತು. ಮತ್ತೆ ಕಾರನ್ನೇರಿ ಕಾರೇಪುರಕ್ಕೆ ತೆರಳಿದರು. ಅಲ್ಲಿ ಮಂಜುನಾಥ್‌ ಮತ ಚಲಾಯಿಸಿದರು.

ಮೂವರು ಶತಾಯುಷಿಗಳ ಮತದಾನ

ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಮೂವರು ಶತಾಯುಷಿಗಳು ಹಕ್ಕು ಚಲಾಯಿಸಿ ಗಮನ ಸೆಳೆದರು. ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕಮ್ಮರಚೇಡು ಗ್ರಾಮದ 108 ವರ್ಷದ ಸಂಜಮ್ಮ ಮತ್ತು ಇದೇ ಗ್ರಾಮದ 103 ವರ್ಷದ ರತ್ನಮ್ಮ ಎಂಬ ಇಬ್ಬರು ಶತಾಯುಷಿಗಳು ವ್ಹೀಲ್‌ಚೇರ್‌ ಸೌಲಭ್ಯ ಬಳಸಿ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು. ಅದೇ ರೀತಿ ಬಳ್ಳಾರಿ ನಗರ ಕ್ಷೇತ್ರದ 100 ವರ್ಷದ ಶತಾಯುಷಿ ಶಾಂತವೀರಮ್ಮ ಅವರು ಸಹ ಕುಟುಂಬಸ್ಥರ ನೆರವಿನೊಂದಿಗೆ ಕೆಕೆಆರ್‌ಟಿಸಿ ಕಚೇರಿಯಲ್ಲಿನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next