ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪತಿ ಶ್ರೀನಿವಾಸ್ ಮತ್ತು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷದ ಧ್ವಜ ಸ್ವೀಕರಿಸಿ ಪಕ್ಷ ಸೇರ್ಪಡೆಯಾದರು.
ಪಕ್ಷ ಸೇರ್ಪಡೆಯಾದ ಬಳಿಕ ಪ್ರತಿಕ್ರಿಯಿಸಿದ ಪೂರ್ಣಿಮಾ, ನನ್ನ ತಂದೆ ಕೆಲ ಕಹಿ ಘಟನೆಗಳಿಂದ ಕಾಂಗ್ರೆಸ್ ಪಕ್ಷವನ್ನುತೊರೆದಿದ್ದರು. ಎಲ್ಲರ ಅಪೇಕ್ಷೆಯ ಮೇರೆಗೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆ ಆಗುತ್ತಿದ್ದೇವೆ. ಸಿದ್ದಾಂತ ಒಪ್ಪಿ ಕಾಂಗ್ರೆಸ್ ಗೆ ಬಂದಿದ್ದು. ಕಾಂಗ್ರೆಸ್ ರಕ್ತ ನನ್ನಲ್ಲಿ ಇದೆ ಎಂದು ಹಲವರು ಹೇಳಿದ್ದರು. ಕಾಂಗ್ರೆಸ್ ಜತೆಗೆ ಮತ್ತೊಂದು ರಾಜಕೀಯ ಪಯಣ ಶುರುವಾಗಿದೆ ಎಂದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ,ಚಂದ್ರಪ್ಪ ಬಿ.ಎನ್, ಮಾಜಿ ಸಿಎಂ ವೀರಪ್ಪ ಮೊಯ್ಲಿ ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿದಂತೆ ಹಲವರು ನಾಯಕರು ಉಪಸ್ಥಿತರಿದ್ದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಸುಧಾಕರ್(ಈಗ ಸಚಿವ) ಅವರು 30322 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸೋಲಿಸಿದ್ದರು.
2020 ರಲ್ಲಿಯೇ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ನಿರ್ಧಾರದ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದಕ್ಕಾಗಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು. ಪೂರ್ಣಿಮಾ ಅವರ ತಂದೆ ಎ. ಕೃಷ್ಣಪ್ಪಕಾಂಗ್ರೆಸ್ ನ ಪ್ರಮುಖ ನಾಯಕರಾಗಿದ್ದರು. ಪಕ್ಷ ತೊರೆದು ಜೆಡಿಎಸ್ ಸೇರಿದ್ದರು.