Advertisement

ನಿಗಮ ಅಧ್ಯಕ್ಷರಿಗೆ ಕೊಕ್‌? ಬಿಎಸ್‌ವೈ ಅವಧಿಯಲ್ಲಿ ನೇಮಕವಾದ ಅಧ್ಯಕ್ಷರಿಗೆ ಸಂಕಷ್ಟ

12:07 AM Aug 07, 2021 | Team Udayavani |

ಬೆಂಗಳೂರು : ನಾಯಕತ್ವ ಬದಲಾವಣೆಯ ಅನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ನೇಮಕಗೊಂಡ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಇದು ಸಿಎಂ ಬೊಮ್ಮಾಯಿ ಅವರಿಗೆ ಬಿಸಿ ತುಪ್ಪವಾಗುವ ಲಕ್ಷಣಗಳು ನಿಚ್ಚಳವಾಗಿವೆ.

Advertisement

ಸಂಪುಟದಲ್ಲಿ ಅವಕಾಶ ದೊರೆಯದೆ ಮುನಿಸಿಕೊಂಡಿರುವ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿ ಸಮಾಧಾನಪಡಿಸುವ ಲೆಕ್ಕಾಚಾರ ಸಿಎಂ ಬೊಮ್ಮಾಯಿ ಅವರದು. ಆದರೆ ಪಕ್ಷದ ನಾಯಕರು ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಬೇಕು ಎನ್ನುವ ಲೆಕ್ಕಾಚಾರ ಇರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಾರದಲ್ಲಿ ಬದಲಾವಣೆ?
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡು ಎರಡು ವರ್ಷ ಪೂರೈಸಿದವರು ಮತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸದೆ ಇರುವವರನ್ನು ಬದಲಾಯಿಸಲು ಪಕ್ಷ ತೀರ್ಮಾನಿಸಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ವಾರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಮುನಿದಿರುವ ಶಾಸಕರ ಹುದ್ದೆಗೆ ಧಕ್ಕೆ ತರದೆ ಕಾರ್ಯಕರ್ತರನ್ನು ಮಾತ್ರ ಬದಲಾಯಿಸುವ ಲೆಕ್ಕಾಚಾರ ನಡೆಸಲಾಗುತ್ತಿದೆ. ಹೊಸ ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸದಸ್ಯರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ.

ಬಿಎಸ್‌ವೈ ಆಪ್ತರೇ ಹೆಚ್ಚು
ಆಗಿನ ಸಿಎಂ ಯಡಿಯೂರಪ್ಪ ಶಾಸಕರ ಜತೆಗೆ ತಮಗೆ ಆಪ್ತರಾದ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು. ಈಗ ಅವರನ್ನು ಬದಲಾಯಿಸಲು ಮುಂದಾದರೆ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಈಗ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಗೆ ಮುಂದಾಗಿರುವ ಪಕ್ಷದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳು ತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next