Advertisement

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

12:49 AM Jul 07, 2024 | Team Udayavani |

ಬೆಂಗಳೂರು: ಇನ್ನು ಮುಂದೆ ಕ್ಲಬ್‌ಗಳಲ್ಲಿ ಇಸ್ಪೀಟ್‌, ಬೆಟ್ಟಿಂಗ್‌, ಡ್ರಗ್ಸ್‌ ವ್ಯವಹಾರಗಳನ್ನು ನಿಲ್ಲಿಸದೆ ಇದ್ದರೆ ಆಯಾ ಎಸ್‌ಪಿ, ಡಿಸಿಪಿ, ಐಜಿಗಳೇ ನೇರ ಹೊಣೆಗಾರರಾಗುತ್ತಾರೆ. ಈ ಅಕ್ರಮಗಳನ್ನು ಮಟ್ಟ ಹಾಕಲು ರವಿವಾರದಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ ನೀಡಿದ್ದಾರೆ.

Advertisement

ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ಎಲ್ಲ ಎಸ್‌ಪಿ, ಡಿಸಿಪಿಗಳು ಮತ್ತು ಐಜಿ ರವಿವಾರದಿಂದಲೇ ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಒಂದೊಂದು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅರ್ಧ ತಾಸಿನಲ್ಲಿ ಭೇಟಿಯ ಶಾಸ್ತ್ರ ಮುಗಿಸಬಾರದು. ಕೂಲಂಕಷ ಪರಿಶೀಲನೆ ನಡೆಸಬೇಕು.

ನೀವು ನಿಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದರೆ ಇಸ್ಪೀಟ್‌, ಬೆಟ್ಟಿಂಗ್‌, ಡ್ರಗ್ಸ್‌ಗಳಂತಹ ಅವ್ಯವಹಾರಗಳು ನಡೆಯುವುದಿಲ್ಲ. ಇನ್ನು ಮುಂದೆಯೂ ಇಂಥವು ನಡೆದರೆ ಅದಕ್ಕೆ ಎಸ್‌ಪಿ ಮತ್ತು ಐಜಿ ಮಟ್ಟದ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು. ಎಸ್‌ಪಿ, ಡಿಸಿಪಿ, ಐಜಿ, ಪೊಲೀಸ್‌ ಆಯುಕ್ತರು ಪ್ರತೀ ದಿನ ಠಾಣೆ ಭೇಟಿಯ ವೇಳೆ ಸ್ಥಳೀಯ ಜನರನ್ನು ಕೂಡ ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳೇನು ಎಂದು ಅರಿಯಬೇಕು ಎಂಬುದಾಗಿಯೂ ಸೂಚನೆ ನೀಡಿದರು.

ಪೊಲೀಸರ ಗಮನಕ್ಕೆ ಬಾರದೆ ಪ್ರಕರಣ ನಡೆಯುವುದಿಲ್ಲ
ಸ್ಥಳೀಯ ಪೊಲೀಸ್‌ ಠಾಣೆಗೆ ತಿಳಿಯದೆ ಯಾವುದೇ ಅಪರಾಧ ನಡೆಯಲು ಸಾಧ್ಯವಿಲ್ಲ. ಮಾದಕ ವಸ್ತು ವ್ಯವಹಾರ, ಕಳವು, ದರೋಡೆ, ಜೂಜು, ಮಟ್ಕಾ ಎಲ್ಲವೂ ಪೊಲೀಸರಿಗೆ ತಿಳಿಯದೆ ನಡೆಯಲು ಸಾಧ್ಯವಿಲ್ಲ. ಕೆಲವೆಡೆ ಪೊಲೀಸರು ದುಷ್ಕರ್ಮಿಗಳ ಜತೆ ಶಾಮೀಲಾಗಿರುತ್ತಾರೆ. ಹೀಗಾಗಿ ಪೊಲೀಸರು ಮನಸ್ಸು ಮಾಡಿದರೆ ಬಹುತೇಕ ಅಪರಾಧಗಳನ್ನು ತಡೆಯಲು ಸಾಧ್ಯ. ಇಂಥ ಪೊಲೀಸರು ಜಾಗೃತರಾಗಲು ಪೊಲೀಸ್‌ ಅಧಿಕಾರಿಗಳು ಆಗಾಗ ಠಾಣೆಗಳಿಗೆ ಭೇಟಿ ನೀಡಬೇಕು. ಒಂದು ತಿಂಗಳಿನಲ್ಲಿ ಕನಿಷ್ಠ ಮೂರು ಠಾಣೆಗಳಿಗೆ ಭೇಟಿ ನೀಡಿ ಜನಸಂಪರ್ಕ ನಡೆಸಿದರೆ ವಿಷಯ ತಿಳಿಯುತ್ತದೆ ಎಂದು ಸಲಹೆ ನೀಡಿದರು.

ರೌಡಿಗಳಲ್ಲಿ ಪೊಲೀಸ್‌ ಭಯ ಹುಟ್ಟಿಸಬೇಕು
ಡ್ರಗ್ಸ್‌ ಮಾರಾಟಗಾರರು ಯಾರು, ರೌಡಿಗಳು ಯಾರು, ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವವರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರುತ್ತದೆ. ಆದರೂ ಅಕ್ರಮ, ಅಪರಾಧಿ ಚಟುವಟಿಕೆಗಳಿಗೆ ಯಾಕೆ ಪೂರ್ಣ ವಿರಾಮ ಬೀಳುತ್ತಿಲ್ಲ? ಪೊಲೀಸರಿಗೆ ಬಂದೂಕು, ರಿವಾಲ್ವರ್‌ ಒದಗಿಸಿರುವುದು ಏಕೆ? ನಿಮ್ಮ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ? ರೌಡಿಗಳಿಗೆ ಪೊಲೀಸ್‌ ಭಯ ಇರಬೇಕು. ಕೆಲವು ಪೊಲೀಸರಿಗೆ ಇ-ಬೀಟ್‌ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲದಿರುವುದು ನಾಚಿಕೆಗೇಡು. ಇದನ್ನೆಲ್ಲ ಸರಿಪಡಿಸಿಕೊಳ್ಳಿ ಎಂದು ಸಿಎಂ ಸಲಹೆ ನೀಡಿದರು.

Advertisement

ಗೃಹ ಸಚಿವ ಡಾ. ಪರಮೇಶ್ವರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಡಿಜಿ-ಐಜಿ ಡಾ.ಅಲೋಕ್‌ ಮೋಹನ್‌, ಸರಕಾರದ ಕಾರ್ಯದರ್ಶಿ ಕೆ.ವಿ. ತ್ರಿಲೋಕ್‌ ಚಂದ್ರ ಉಪಸ್ಥಿತರಿದ್ದರು.

“ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮುಂತಾದೆಡೆ ಮಾದಕ ವಸ್ತು ದಂಧೆ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ.” – ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next