Advertisement

Karnataka: ಸಂಸತ್‌ ಘಟನೆ- ವಿಧಾನಸಭೆ ಕಲಾಪದಲ್ಲಿ ಗದ್ದಲ

12:00 AM Dec 14, 2023 | Team Udayavani |

ಬೆಳಗಾವಿ: ಸಂಸತ್‌ನಲ್ಲಿ ನಡೆದ ಭದ್ರತಾ ಲೋಪ ಪ್ರಕರಣ ಬುಧವಾರ ವಿಧಾನಸಭೆಯಲ್ಲೂ ಗದ್ದಲಕ್ಕೆ ಕಾರಣವಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಂಸದ ಪ್ರತಾಪ ಸಿಂಹ ಅವರ ಹೆಸರು ಪ್ರಸ್ತಾವಿಸಿದ್ದು, ಆಡಳಿತ-ವಿಪಕ್ಷದ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಕಾಂಗ್ರೆಸ್‌ ಶಾಸಕರು ಆಗ್ರಹಿಸಿದರು.

Advertisement

ದಿಲ್ಲಿ ಘಟನೆ ಬಗ್ಗೆ ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ತೀವ್ರ ಕಳವಳ ವ್ಯಕ್ತಪಡಿಸಿದರು. ಭದ್ರತಾ ವಿಚಾರದಲ್ಲಿ ರಾಜಿ ಸಲ್ಲದು. ಭಯ ಹುಟ್ಟಿಸುವ ಶಕ್ತಿಗಳ ನಡೆ ಖಂಡನೀಯ ಎಂದು ಹೇಳಿದರು. ವಿಪಕ್ಷ ನಾಯಕ ಆರ್‌.ಅಶೋಕ್‌, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ| ಜಿ.ಪರಮೇಶ್ವರ ಖಂಡನಾ ನಿರ್ಣಯದಲ್ಲಿ ಮಾತನಾಡಿದರು.
ನಮಗೂ ಇದು ಎಚ್ಚರಿಕೆ ಗಂಟೆ. ಸಂಸತ್‌ ಪ್ರವೇಶಕ್ಕೆ ಬೇಕಾದ ಪಾಸನ್ನು ನಮ್ಮ ಸಂಸದರು ನೀಡಿದ್ದಾರೆಂಬ ಮಾಹಿತಿ ಇದೆ. ಮೇಲ್ನೋಟಕ್ಕೆ ಇದು ಭದ್ರತಾ ಲೋಪದಂತೆ ಕಂಡು ಬರುತ್ತಿದೆ. ನಮ್ಮಲ್ಲೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಇಲ್ಲಿಯೂ ಉಗ್ರರು ಅಥವಾ ಭಯೋತ್ಪಾದಕರು ಪ್ರವೇಶಿಸಬಹುದು’ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಈ ಮಧ್ಯೆ ಎದ್ದುನಿಂತ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂಸದ ಪ್ರತಾಪ ಸಿಂಹ ಬುದ್ಧಿವಂತ ಎಂದುಕೊಂಡಿದ್ದೆ. ಯಾಕೆ ಪಾಸ್‌ ಕೊಟ್ಟರೋ ಗೊತ್ತಿಲ್ಲ. ಘಟನೆಯಿಂದ ಸಂಸತ್ತಿನಲ್ಲಿ ಸಂಸದರು ಇಲಿಗಳ ರೀತಿ ಬಚ್ಚಿಟ್ಟುಕೊಂಡಿದ್ದರು” ಎಂದು ವ್ಯಂಗ್ಯವಾಡಿದರು.

ಆಗ ಕಾಂಗ್ರೆಸ್‌ ಶಾಸಕರಾದ ನಯನಾ ಮೋಟಮ್ಮ, ಮಂಥರ್‌ ಗೌಡ, ರಿಜ್ವಾನ್‌ ಅರ್ಷದ್‌ ಮೊದಲಾದವರು ಬಿಜೆಪಿ ಸಂಸದರು ಪಾಸ್‌ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಈ ಜಾಗದಲ್ಲಿ ಕಾಂಗ್ರೆಸ್‌ ಸಂಸದ ಅಥವಾ ಅಲ್ಪಸಂಖ್ಯಾಕರು ಇದ್ದಿದ್ದರೆ ಸದನವನ್ನು ರಣರಂಗವಾಗಿಸುತ್ತಿದ್ದರು. ಪ್ರತಾಪ್‌ ಸಿಂಹ ರಾಜೀನಾಮೆ ನೀಡಲಿʼ ಎಂದು ಆಗ್ರಹಿಸಿದರು.

ಇದು ಬಿಜೆಪಿ ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಇದು ಇಡೀ ದೇಶವೇ ಕಳವಳಪಡುವ ಸಂಗತಿ. ಈ ಬಗ್ಗೆ ಪಕ್ಷವನ್ನು ಎಳೆತರುವ ಅಗತ್ಯವಿಲ್ಲ. ಒಂದೊಮ್ಮೆ ಪಾಸ್‌ ಅನ್ನು ನಿಮ್ಮ ಸೋದರ ಕೊಟ್ಟಿದ್ದರೆ ಅವರನ್ನು ನಾವು ಭಯೋತ್ಪಾದಕ ಎಂದು ಕರೆಯಲು ಸಾಧ್ಯವೇ? ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು.

ಇದರಿಂದ ಕೆರಳಿದ ಗ್ರಾಮೀಣಾ ಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಒಂದೊಮ್ಮೆ ಪಾಸ್‌ ಅನ್ನು ಕಾಂಗ್ರೆಸ್‌ ಶಾಸಕರು ಕೊಟ್ಟಿದ್ದರೆ ಸದನ ರಣರಂಗವಾಗುತ್ತಿತ್ತು. ದೇಶದ್ರೋಹಿ ಎಂಬ ಪಟ್ಟ ಕಟ್ಟುತ್ತಿದ್ದರು ಎಂದರು.

Advertisement

ಪ್ರತಾಪ ಸಿಂಹ ವಿಚಾರಣೆಗೆ ಸಿಎಂ ಆಗ್ರಹ
ಸಂಸತ್‌ ಭವನದ ಮೇಲೆ ನಡೆದಿರುವ ದಾಳಿ ಅಘಾತಕಾರಿ. ಈ ದಾಳಿಯ ಹಿಂದೆ ಬೇರೆ ಹುನ್ನಾರಗಳಿರಬಹುದೆಂಬ ಸಂಶಯ ಬರುತ್ತಿದೆ. ದೇಶದ ಸುರಕ್ಷತೆ ಬಗ್ಗೆ ಪ್ರಶ್ನೆಗಳಿಗೆ ಕಾರಣವಾಗಿದೆ. ದಾಳಿಕೋರರಿಗೆ ಮೈಸೂರಿನ ಸಂಸದ ಪ್ರತಾಪ ಸಿಂಹ ಪಾಸ್‌ ನೀಡಿರುವ ವರದಿಗಳು ನಿಜವಾಗಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಲೋಕಸಭೆಯೊಳಗೆ ನಾಲ್ವರ ಅತಿಕ್ರಮ ಪ್ರವೇಶ, ಇದನ್ನು ತಡೆಯುವಲ್ಲಿ ಕೇಂದ್ರ ಸರಕಾರದ ವೈಫ‌ಲ್ಯ ಖಂಡಿಸಿ ಅವರು “ಎಕ್ಸ್‌’ನಲ್ಲಿ ಬರೆದಿದ್ದಾರೆ.

ತನಿಖೆಯಲ್ಲೂ ಲೋಪ: ರಾಜ್ಯ ಕಾಂಗ್ರೆಸ್‌
ರಾಜ್ಯ ಕಾಂಗ್ರೆಸ್‌ ಸಹ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸಂಸತ್ತಿನ ಇತಿಹಾಸದಲೇ ಈ ಮಟ್ಟಿನ ಭದ್ರತಾ ಲೋಪವಾಗಿರಲಿಲ್ಲ, ಡಿ.13ರ ಒಳಗೆ ಸಂಸತ್ತನ್ನು ಸ್ಫೋಟಿಸುತ್ತೇವೆ ಎಂದು ಖಲಿಸ್ಥಾನಿ ಉಗ್ರರು ಬೆದರಿಕೆ ಹಾಕಿದ ಅನಂತರವೂ ಸಂಸತ್ತಿನ ಭದ್ರತೆ ನಿರ್ಲಕ್ಷಿಸಿದ್ದೇಕೆ? ಸಂಸತ್ತಿಗೆ ಯಾರು ಬೇಕಿದ್ದರೂ ನುಗ್ಗಬಹುದೇ? ಕೇವಲ ಒಂದು ಶಾಪಿಂಗ್‌ ಮಾಲ್‌ನಲ್ಲಿ ಇರುವಷ್ಟು ಭದ್ರತೆಯೂ ಸಂಸತ್ತಿಗಿಲ್ಲ. ಈ ಕೃತ್ಯಕ್ಕೆ ಕೂಗುಮಾರಿ ಪ್ರತಾಪ ಸಿಂಹರ ಸಹಕಾರ ಇರುವುದು ದುರಂತ ಎಂದು ಟೀಕಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next