ಹೊಸದಿಲ್ಲಿ/ಬೆಂಗಳೂರು: ಕಾವೇರಿ ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ನ. 1ರಿಂದ ನ. 15ರ ವರೆಗೆ ಪ್ರತಿದಿನ ತಮಿಳುನಾಡಿಗೆ 2,600 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ.
ಸೋಮವಾರ ದಿಲ್ಲಿಯಲ್ಲಿ ಸಮಿತಿಯ 89ನೇ ಸಭೆ ನಡೆಯಿತು. ಕರ್ನಾಟಕ ರಾಜ್ಯದ ಜಲಾಶಯಗಳಿಗೆ ಶೂನ್ಯ ಒಳಹರಿವು ಇದೆ. ಹೀಗಾಗಿ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯದ ಅಧಿಕಾರಿಗಳು ಪ್ರತಿಪಾದಿಸಿದರು. ಮುಂದಿನ 15 ದಿನಗಳ ವರೆಗೆ ಪ್ರತೀ ದಿನ 13 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಆಗ್ರಹಿಸಿತು. ಎರಡೂ ಕಡೆಯ ವಾದ ಆಲಿಸಿದ ಸಮಿತಿಯು 15 ದಿನಗಳ ಕಾಲ 2,600 ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತು.
ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಂಡ್ಯ ಭಾಗದ ರೈತರು ಪದೇ ಪದೆ ನಮಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ. ಬಿಜೆಪಿ ಕೂಡ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ಅಸಹಾಯಕವಾಗಿದೆ ಎಂದಿದ್ದಾರೆ.
ತಮಿಳುನಾಡಿಗೆ ನೀರು ಹರಿಸಬೇಕು ಎಂಬ ನಿರ್ದೇಶನವನ್ನು ಒಪ್ಪುವ ಸ್ಥಿತಿಯಲ್ಲಿ ನಾವಿಲ್ಲ. ಕೆಆರ್‌ಎಸ್ ಒಳಹರಿವು ಶೂನ್ಯವಾಗಿದೆ. ಎಲ್ಲ ಜಲಾಶಯಗಳು ಸೇರಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕುಡಿಯುವುದಕ್ಕೂ ನೀರಿನ ಕೊರತೆ ಉಂಟಾಗಲಿದೆ.
– ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ