ರಾಯಚೂರು: ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಮಹತ್ವಾಕಾಂಕ್ಷಿ ಯೋಜನೆ “ಕರ್ನಾಟಕ ಒನ್’ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದರೂ ಇಲಾಖೆಗಳ ಸಮನ್ವಯ ಕೊರತೆಯಿಂದ ಸೇವೆ ವೇಗ ಕಳೆದುಕೊಂಡಿದೆ. ನಾನಾ ಕೆಲಸ -ಕಾರ್ಯಗಳ ನಿಮಿತ್ತ ಜನ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕಳೆದ ನ.1ರಿಂದ ರಾಜ್ಯದಲ್ಲಿ “ಕರ್ನಾಟಕ ಒನ್’ ಸೇವಾ ಕೇಂದ್ರ ಆರಂಭಿಸಿದೆ.
ಸಿಎಂಸಿ ಎನ್ನುವ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಿದ್ದು, ಸಂಸ್ಥೆ ಕೆಲಸ ಆರಂಭಿಸಿದ್ದಾರೆ. ಆದರೀಗ ಅದರಲ್ಲಿ ನಿರೀಕ್ಷಿತ ಮಟ್ಟದ ಸೇವೆಗಳೇ ಸಿಗದ ಕಾರಣ ಜನರಿಗೆ ಅಲೆಯುವ ಸಂಕಟ ತಪ್ಪುತ್ತಿಲ್ಲ. ಜಿಲ್ಲೆಯ “ಕರ್ನಾಟಕ ಒನ್’ ಕೇಂದ್ರದಲ್ಲಿ ಈಗ ಆಧಾರ್ ತಿದ್ದುಪಡಿ, ಆಯುಷ್ಮಾನ್ ಕಾರ್ಡ್ ಸೌಲಭ್ಯ ಸೇರಿದಂತೆ ಕೆಲ ಸೌಲಭ್ಯಗಳು ಮಾತ್ರ ಲಭ್ಯವಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಸಿಗಬೇಕಾದ ಸಾಕಷ್ಟು ಸೇವೆಗಳು ಇನ್ನೂ ಆರಂಭವೇ ಆಗಿಲ್ಲ.
ಸಮನ್ವಯತೆ ಕೊರತೆ: ಈಗಾಗಲೇ ಎಲ್ಲ ಇಲಾಖೆಗಳಿಗೂ ಕೇಂದ್ರದಿಂದ ಪತ್ರ ವ್ಯವಹಾರ ಮಾಡಲಾಗಿದ್ದು, ಆಯಾ ಇಲಾಖೆಗಳ ಸೇವೆ ಆರಂಭಿಸಲು ಬೇಕಾದ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಆದರೆ ಇಲಾಖೆಗಳ ಅ ಧಿಕಾರಿಗಳು ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸಮಸ್ಯೆಯಾಗುತ್ತಿದೆ. ಕೇಂದ್ರದಲ್ಲಿ ಆಹಾರ ಇಲಾಖೆ, ಜೆಸ್ಕಾಂ, ನಾಡಕಚೇರಿ ಸೌಲಭ್ಯಗಳು, ಸಾರಿಗೆ ಇಲಾಖೆ ಸೇರಿ ಇನ್ನೂ ಸಾಕಷ್ಟು ಸೇವೆಗಳು ಆರಂಭವೇ ಆಗಿಲ್ಲ. ಇದರಿಂದ ಜನ ಬಂದರೂ ಕೆಲಸವಾಗದೆ ಹಿಂದಿರುಗುವಂತಾಗಿದೆ.
ಆಧಾರ್-ಆಯುಷ್ಮಾನ್‌ಗೆ ಸ್ಪಂದನೆ: ಈಗ ಲಭ್ಯವಿರುವ ಆಧಾರ್ ಮತ್ತು ಆಯುಷ್ಮಾನ್ ಸೇವೆ ಪಡೆಯಲು ಜನ ಹೆಚ್ಚಾಗಿ ಬರುತ್ತಿದ್ದಾರೆ. ಆಧಾರ್ ನೋಂದಣಿ, ಹೆಸರು, ವಿಳಾಸ ತಿದ್ದುಪಡಿಗೆ ಬೆಳಗ್ಗೆಯೇ ಬಂದು ಟೋಕನ್ ಪಡೆಯಬೇಕಿದೆ. ಸಂಜೆ ಐದು ಗಂಟೆವರೆಗೂ ಸೇವೆ ಲಭ್ಯವಿದ್ದು, ಈಗ ನಾಲ್ಕು ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಸಾವಿರಾರು ಜನ ಕೇಂದ್ರಕ್ಕೆ ಭೇಟಿ ನೀಡಿ ಕೆಲಸ ಮಾಡಿಕೊಂಡಿದ್ದಾರೆ.
ಇನ್ನು ಇಲ್ಲಿ ಎಲ್‌ಇಡಿ ಬಲ್ಬ್ಗಳು ಕೂಡ ಲಭ್ಯವಿದ್ದು, ಜನ ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಒಂದು ಆಧಾರ್ ಕಾರ್ಡ್‌ಗೆ 10 ಬಲ್ಬ್ ನೀಡಲಾಗುತ್ತಿದೆ. ಈಗಿನ ಜನರ ಪ್ರತಿಕ್ರಿಯೆ ಕಂಡರೆ ತ್ವರಿತಗತಿಯಲ್ಲಿ ಹೆಚ್ಚು ಸೇವೆ ಒದಗಿಸಬೇಕೆನ್ನುವುದು ಜನರ ಒತ್ತಾಸೆ.
ಸರ್ವರ್ ಸಮಸ್ಯೆ: ಕರ್ನಾಟಕ ಒನ್ ಕೇಂದ್ರಕ್ಕೂ ಸರ್ವರ್ ಸಮಸ್ಯೆ ಬಾ ಧಿಸುತ್ತಿದೆ. ಈಗ ಲಭ್ಯವಿರುವ ಸೇವೆ ನೀಡಲು ಕೆಲವೊಮ್ಮೆ ಸರ್ವರ್ ಕೈ ಕೊಡುತ್ತಿದೆ. ಇದರಿಂದ ಜನ ಗಂಟೆಗಟ್ಟಲೇ ಕಾಯದೆ ವಿ ಧಿ ಇಲ್ಲ. ಇನ್ನೂ ವಿವಿಧ ಇಲಾಖೆಗಳು ಸರ್ವರ್ ಸಂಪರ್ಕವನ್ನೂ ನೀಡಿಲ್ಲ. ಪ್ರತ್ಯೇಕ ಅಕೌಂಟ್ ತೆರೆಯುವಲ್ಲೂ ವಿಳಂಬ ಮಾಡುತ್ತಿದ್ದಾರೆ. ಇದು ಸೇವೆಯ ಹಿನ್ನಡೆಗೆ ಕಾರಣವಾಗಿದೆ.
ಸರ್ಕಾರ ನಿರ್ವಹಣೆ ಹೊಣೆ ನೀಡಿದ್ದು, ನಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದೇವೆ. ಆದರೆ, ಸಾಕಷ್ಟು ಇಲಾಖೆಗಳು ಇನ್ನೂ ನಮ್ಮೊಂದಿಗೆ ಸರಿಯಾಗಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಸರ್ವರ್ ಲಿಂಕ್ ಮಾಡಿ ಲಾಗಿನ್ ನೀಡಬೇಕು. ಈಗಾಗಲೇ ಸಂಬಂಧಿಸಿದ ಇಲಾಖೆಗಳ ಜತೆ ಪತ್ರ ವ್ಯವಹಾರ ಕೂಡ ಮಾಡಲಾಗಿದೆ.
–ಹೆಸರು ಹೇಳಲಿಚ್ಛಿಸದ ಅಧಿಕಾರಿ
–ಸಿದ್ಧಯ್ಯಸ್ವಾಮಿ ಕುಕನೂರು