ಮಡಿಕೇರಿ: ಕರ್ನಾಟಕ ಹಿಂದಿನಂತಿಲ್ಲ, ಪ್ರಗತಿಪಥದಲ್ಲಿ ಸಾಗುತ್ತಿದೆ. ಜಾತಿ, ಮತ, ಭೇದವಿಲ್ಲದೆ ಪ್ರತಿಯೊಬ್ಬರಿಗೆ ಬದುಕುವ ಶಕ್ತಿಯನ್ನು ಸರಕಾರ ತುಂಬುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸರಕಾರ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಿ ದುಡಿಯುವ ವರ್ಗದ ಆದಾಯವನ್ನು ಹೆಚ್ಚಿಸುತ್ತಿದೆ. ವಿವಿಧ ಇಲಾಖೆಗಳಲ್ಲಿ ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಸಮೃದ್ಧಿಯ ಕರ್ನಾಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಫಲಾನುಭವಿಗಳ ಸಮ್ಮೇಳನದಲ್ಲಿ ಪ್ರತೀ ಜಿಲ್ಲೆಯಲ್ಲಿ 30ರಿಂದ 50 ಸಾವಿರ ಕುಟುಂಬಗಳಿಗೆ ಸರಕಾರದ ಕಾರ್ಯಕ್ರಮಗಳ ಸೌಲಭ್ಯವನ್ನು ತಲುಪಿಸಲಾಗುತ್ತಿದೆ. ಆ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕೆಂಪುಕೋಟೆಯ ಮೇಲೆ ಭಾಷಣ ಮಾಡುತ್ತ ಪ್ರಧಾನಿ ಪ್ರತೀ ಮನೆಗೆ ಕುಡಿಯುವ ನೀರನ್ನು ನೀಡುವುದಾಗಿ ಭರವಸೆ ನೀಡಿದ್ದರು. ಮೋದಿ ಅವರು ನುಡಿದಂತೆ ನಡೆದಿದ್ದು, ಮೂರು ವರ್ಷಗಳಲ್ಲಿ ದೇಶದ 12 ಕೋಟಿ ಮನೆಗಳಿಗೆ ನೀರನ್ನು ಒದಗಿಸಿದ್ದಾರೆ. ರಾಜ್ಯದ 40 ಲಕ್ಷ ಮನೆಗಳು ನೀರಿನ ಸಂಪರ್ಕವನ್ನು ಪಡೆದಿವೆ. ಇದೊಂದು ಕ್ರಾಂತಿ ಎಂದು ಸಿಎಂ ಶ್ಲಾಘಿ ಸಿದರು.
ಗ್ಯಾರಂಟಿ ಕಾರ್ಡ್ ಕಸದ ಬುಟ್ಟಿಗೆ
ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವ ಮೂಲಕ ಸ್ತ್ರೀ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಜನರಿಗೆ ಏನನ್ನೂ ನೀಡಲಾಗದವರು ಈಗ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಇದು ಗ್ಯಾರಂಟಿ ಕಾರ್ಡ್ ಅಲ್ಲ, ಬೋಗಸ್ ಕಾರ್ಡ್ ಎಂದು ಸಿಎಂ ವಾಗ್ಧಾಳಿ ನಡೆಸಿದರು.