Advertisement
ಈ ಬಾರಿ ಮುಂಗಾರು ಆರಂಭದಿಂದಲೂ ಮಳೆಯ ಪ್ರಮಾಣ ಕ್ಷೀಣಿಸಿದೆ. ಜೂನ್‌ನಲ್ಲಿ ವಾಡಿಕೆಯಂತೆ 199 ಮಿ.ಮೀ. ಆಗಬೇಕಿದ್ದರೂ 87 ಎಂ.ಎಂ. ಅಷ್ಟೇ ಮಳೆಯಾಗಿತ್ತು. ಜುಲೆ ತಿಂಗಳಿನಲ್ಲೂ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಒಟ್ಟು ಶೇ. 45ರಷ್ಟು ಮಳೆ ಕೊರತೆ ಉಂಟಾಗಿದೆ. ಅದರಲ್ಲೂ ಹಾಸನ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಮಳೆಯ ಅಭಾವವಿದ್ದರೆ ಹಾಸನ ಮತ್ತು ಧಾರವಾಡದಲ್ಲಿ ತೇವಾಂಶದ ಕೊರತೆಯೂ ಇದೆ.
Related Articles
Advertisement
ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಕೋಲಾರ ಜಿಲ್ಲೆಗಳಲ್ಲಿ ಮಳೆಯ ಅತೀವ ಕೊರತೆಯಿದ್ದರೆ ಬಾಗಲಕೋಟೆ, ಕೊಪ್ಪಳ, ರಾಯಚೂರು, ರಾಮನಗರ ಜಿಲ್ಲೆಗಳಲ್ಲೂ ಸಾಕಷ್ಟು ಮಳೆ ಕೊರತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಮೇಲೂ ಮಳೆ ಕೊರತೆಯ ಛಾಯೆ ಆವರಿಸಿದೆ. 80 ತಾಲೂಕಿನ 286 ಹೋಬಳಿಗಳಲ್ಲಿ ಮಳೆ ಕೊರತೆ ಇದೆ. ಆಳಂದ, ಅಫಜಲ್‌ಪುರ, ಬಬಲೇಶ್ವರ, ನಿಡಗುಂದಿ, ಮುದ್ದೇಬಿಹಾಳ, ಟಿ.ನರಸೀಪುರ, ಕೆಜಿಎಫ್ ಸೇರಿ 7 ತಾಲೂಕಿನ 81 ಹೋಬಳಿಗಳಲ್ಲಿ ಮಳೆ ಕೊರತೆ ಅತಿಯಾಗಿ ಕಾಡುತ್ತಿದೆ.
ಮುಂದಿವೆ ಮಳೆಯ ದಿನಗಳು?
ಮುಂಗಾರು ಹಂಗಾಮಿನಲ್ಲಿ 82.351 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆದರೆ ಮಳೆ ಕೊರತೆಯಿಂದಾಗಿ 26.819 ಲಕ್ಷ ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಆಗಿದೆ. ಆರಂಭದಲ್ಲಿ ಮಳೆ ಕೊರತೆ ಎದುರಿಸುತ್ತಿದ್ದ ಕರಾವಳಿ, ಮಲೆನಾಡಿನ ಕೆಲವೆಡೆ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗಿದೆ. ಇದರಿಂದ ಮಳೆ ಕೊರತೆ ಹಾಗೂ ತೇವಾಂಶ ಕೊರತೆಯಲ್ಲಿ ಇಳಿಕೆಯಾಗಲಿದೆ.
ಪರಿಸ್ಥಿತಿ ಪರಿಶೀಲಿಸಿ ನಿರ್ಧಾರ
ಮುಂಗಾರು ಆರಂಭದಿಂದ ಎರಡು ತಿಂಗಳು ಪೂರ್ಣಗೊಂಡ ಅನಂತರದ ಹವಾಮಾನ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕೇಂದ್ರ ಸರಕಾರದ ಬರ ಕೈಪಿಡಿ 2016ರ ಅನ್ವಯ ಬರಪೀಡಿತ ಪ್ರದೇಶಗಳ ಘೋಷಣೆಗೆ ಕೇವಲ ಮಳೆ ಕೊರತೆಯಷ್ಟೇ ಮಾನದಂಡವಾಗಿರುವುದಿಲ್ಲ. ಹೀಗಾಗಿ ಆಗಸ್ಟ್ ತಿಂಗಳ ಅನಂತರದ ಹವಾಮಾನ ಪರಿಸ್ಥಿತಿ ಗಮನಿಸಿಕೊಂಡು ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಣಯ ಕೈಗೊಂಡು, ಸಂಪುಟ ಸಭೆಯ ಮುಂದೆ ಮಂಡಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕೆಲವು ವಾರಗಳಿಂದ ಮಳೆಗಾಲ ಚುರುಕು – ಕರಾವಳಿಯಲ್ಲಿ ಮಳೆ ಕೊರತೆ ಇಳಿಕೆ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಕೆಲವು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಮಳೆ ಮತ್ತಷ್ಟು ಬಿರುಸು ಪಡೆಯುವ ನಿರೀಕ್ಷೆ ಇದೆ. ಜುಲೈ ತಿಂಗಳ ಆರಂಭದ ದಿನಗಳ ತನಕ ಉಭಯ ಜಿಲ್ಲೆಗಳಲ್ಲಿ ಇದ್ದ ಮಳೆ ಕೊರತೆ ಸದ್ಯ ಕಡಿಮೆಯಾಗಿದೆ. ಕರಾವಳಿ ಭಾಗದಲ್ಲಿದ್ದ ಮಳೆ ಕೊರತೆ ಸದ್ಯ ಶೇ. 24ಕ್ಕೆ ತಗ್ಗಿದೆ. ಉಭಯ ಜಿಲ್ಲೆಗಳ ಪೈಕಿ ಮೊದಲ ಬಾರಿಗೆ ಕಾಪು ತಾಲೂಕಿನಲ್ಲಿ ವಾಡಿಕೆಗಿಂತ ತುಸು ಹೆಚ್ಚಿನ ಮಳೆಯಾಗಿದೆ.
ಹವಾಮಾನ ಇಲಾಖೆಯ ಅಂಕಿ ಅಂಶದಂತೆ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ, ಉಡುಪಿ ಜಿಲ್ಲೆಯಲ್ಲಿ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆ ಇದೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶೇ. -41, ಬಂಟ್ವಾಳದಲ್ಲಿ -19, ಮಂಗಳೂರಿನಲ್ಲಿ -14, ಪುತ್ತೂರಿನಲ್ಲಿ -32, ಸುಳ್ಯದಲ್ಲಿ -18, ಮೂಡುಬಿದಿರೆಯಲ್ಲಿ -5, ಕಡಬದಲ್ಲಿ -44ರಷ್ಟು ಮಳೆ ಕೊರತೆ ಇದೆ. ಅದೇ ರೀತಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ -24, ಕುಂದಾಪುರದಲ್ಲಿ -5, ಉಡುಪಿಯಲ್ಲಿ -10, ಬೈಂದೂರಿನಲ್ಲಿ-9, ಬ್ರಹ್ಮಾವರದಲ್ಲಿ -12, ಕಾಪುವಿನಲ್ಲಿ 2 ಮತ್ತು ಹೆಬ್ರಿಯಲ್ಲಿ -38 ರಷ್ಟು ಮಳೆ ಕೊರತೆ ಇದೆ.
ನಾಲ್ಕು ದಿನ “ಎಲ್ಲೋ ಅಲರ್ಟ್”
ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜು. 16ರಿಂದ 19ರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬಿರುಸಿನಿಂದ ಕೂಡಿದ ಮಳೆಯಾಗಲಿದ್ದು, ಗಾಳಿ, ಸಮುದ್ರದ ಅಬ್ಬರ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂ. 1ರಿಂದ ಮಳೆ ವಿವರ (ಮಿ.ಮೀ.)
ಜಿಲ್ಲೆ ವಾಡಿಕೆ ಮಳೆ ಸುರಿದ ಮಳೆ ಶೇ.
ದಕ್ಷಿಣ ಕನ್ನಡ 1,523 1,088 -29
ಉಡುಪಿ 1,162 892 -19
ಉತ್ತರ ಕನ್ನಡ 1,162 892 -23
ಕರಾವಳಿ 1,378 1,053 -24