Advertisement

Karnataka: ಸಂಪುಟ ವಿಸ್ತರಣೆಯಲ್ಲಿ ಮೇಲ್ಮನೆ ಸದಸ್ಯರ ನಿರ್ಲಕ್ಷ್ಯ

11:47 PM May 25, 2023 | Team Udayavani |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯರನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಈಗ ಸಚಿವಾಕಾಂಕ್ಷಿಗಳಲ್ಲಿ ಉಂಟಾಗಿದೆ.

Advertisement

ಕಳೆದ ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌, ಸಚಿವರಾಗಿ ಡಾ| ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ಕೆ.ಜೆ.ಜಾರ್ಜ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ರಾಮಲಿಂಗಾ ರೆಡ್ಡಿ ಹಾಗೂ ಜಮೀರ್‌ ಅಹ್ಮದ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲಿ ವಿಪಕ್ಷ ನಾಯಕರಾಗಿದ್ದ ಬಿ.ಕೆ.ಹರಿಪ್ರಸಾದ್‌ ಸಹಜ ಆಯ್ಕೆ ಎಂಬ ನಿರೀಕ್ಷೆಗಳಿದ್ದವು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾದವು.

ಈಗ ಸಂಪುಟ ವಿಸ್ತರಣೆಗೆ ದಿಲ್ಲಿಯಲ್ಲಿ ಗುರುವಾರ ಇಡೀ ದಿನ ಮ್ಯಾರಥಾನ್‌ ಸಭೆಗಳು ನಡೆದಿವೆ. ದಿಲ್ಲಿಯಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಈ ಕಂತಿನಲ್ಲೂ ವಿಧಾನ ಪರಿಷತ್ತಿನ ಸದಸ್ಯರಿಗೆ ಸಂಪುಟದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಹಿಂದುಳಿದ ವರ್ಗಕ್ಕೆ ಸೇರಿದ ಬಿ.ಕೆ.ಹರಿಪ್ರಸಾದ್‌, ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದ ನಜೀರ್‌ ಅಹ್ಮದ್‌, ಸಲೀಂ ಅಹ್ಮದ್‌ ಹಾಗೂ ಬಂಜಾರ ಸಮುದಾಯದ ಪ್ರಕಾಶ್‌ ರಾಥೋಡ್‌ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ ದಿಲ್ಲಿ ಮಾತುಕತೆ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಿಗೆ ಅವಕಾಶ ಕಲ್ಪಿಸುವುದು ಕಷ್ಟವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಬೆಳವಣಿಗೆಯಿಂದ ವಿಧಾನ ಪರಿಷತ್ತಿನ ಸದಸ್ಯರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಸವರಾಜ ಪಾಟೀಲ್‌ ಹುಮಾನಾಬಾದ್‌, ಟಿ.ಜಾನ್‌, ನಫೀಸಾ ಫ‌ಜಲ್‌, ರಾಣಿ ಸತೀಶ್‌, ಪ್ರೊ| ಬಿ.ಕೆ.ಚಂದ್ರಶೇಖರ್‌, ವೀರಕುಮಾರ್‌ ಪಾಟೀಲ್‌ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅನಂತರ ಪರಿಷತ್ತಿನ ಸದಸ್ಯರಿಗೆ ಅವಕಾಶಗಳನ್ನು ಕಡಿಮೆ ಮಾಡಿಕೊಂಡು ಬರಲಾಯಿತು. ಈಗ ಅದನ್ನು ಶೂನ್ಯಮಟ್ಟಕ್ಕೆ ತರುವ ಪ್ರಯತ್ನಗಳು ನಡೆದಿವೆ. ಈ ರೀತಿಯಾದರೆ ಪರಿಷತ್‌ ಯಾಕೆ ಬೇಕು ಎಂದು ಪ್ರಶ್ನಿಸತಗೊಡಗಿದ್ದಾರೆ.

Advertisement

ಸಭಾನಾಯಕನ ಕಾಯಿದೆಗೆ ತಿದ್ದುಪಡಿ?
ಎಚ್‌.ಕೆ.ಪಾಟೀಲ್‌ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನೇ ಸಚಿವರನ್ನಾಗಿ ಮಾಡಿ ಅವರೇ ಸದನದ ಸಭಾನಾಯಕರಾಗಬೇಕು ಎಂಬ ಕಾಯಿದೆ ರೂಪಿಸಲಾಗಿತ್ತು. ಅನಂತರದ ದಿನಗಳಲ್ಲಿ ಅದನ್ನೇ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ಆ ಕಾಯಿದೆಗೆ ತಿದ್ದುಪಡಿ ತಂದು ವಿಧಾನ ಪರಿಷತ್ತಿನ ಸದಸ್ಯರನ್ನು ಸಭಾ ನಾಯಕನ ಸ್ಥಾನದಿಂದ ದೂರವಿಡುವ ಆಲೋಚನೆಗಳು ದಿಲ್ಲಿಯ ಕಾಂಗ್ರೆಸ್‌ ವಲಯದಲ್ಲಿ ನಡೆದಿವೆ.

ವಿಧಾನಸಭೆಗೆ ಆಯ್ಕೆಯಾದ ಶಾಸಕರು ಸಚಿವರಾಗಿ ನೇಮಕಗೊಂಡು ವಿಧಾನ ಪರಿಷತ್ತಿನ ಸಭಾ ನಾಯಕರಾಗಬಹುದು ಎಂಬ ತಿದ್ದುಪಡಿ ತಂದರೆ ಮೇಲ್ಮನೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕೆಂಬುದು ಕಡ್ಡಾಯವಾಗುವುದಿಲ್ಲ. ಆಗ ಶಾಸಕರಿಗೆ ಹೆಚ್ಚಿನ ಸಚಿವ ಸ್ಥಾನಗಳು ಲಭ್ಯವಾಗಲಿವೆ ಎಂಬ ಚರ್ಚೆಗಳು ನಡೆದಿರುವುದು ವಿಧಾನ ಪರಿಷತ್ತಿನ ಸದಸ್ಯರಲ್ಲಿ ಅಸಮಾಧಾನ ಹಾಗೂ ತಳಮಳಕ್ಕೂ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next