Advertisement

ಪ್ರಮಾಣಕ್ಕೆ ಕರ್ನಾಟಕ ಮಾದರಿ​​​​​​​

06:00 AM Dec 16, 2018 | Team Udayavani |

ಭೋಪಾಲ/ಐಜ್ವಾಲ್‌: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಡಿ.17ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಮಾದರಿಯಲ್ಲೇ ಈ ಪ್ರಮಾಣ ವಚನ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ.

Advertisement

ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಪದಗ್ರಹಣದ ವೇಳೆ ಬಿಎಸ್‌ಪಿ, ಎಸ್‌ಪಿ, ಟಿಎಂಸಿ, ಡಿಎಂಕೆ, ಆರ್‌ಜೆಡಿ, ಎನ್‌ಸಿಪಿ, ಟಿಡಿಪಿ ನಾಯಕರು ಭಾಗವಹಿಸುವ ಮೂಲಕ ಪ್ರತಿಪಕ್ಷಗಳಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿಯೇ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಮಹಾ ಮೈತ್ರಿಕೂಟ ರಚಿಸುವ ಯೋಚನೆಯೂ ಟಿಸಿಲೊಡೆದಿತ್ತು. ಡಿ.17ರಂದು (ಸೋಮವಾರ) ಅದೇ ಮಾದರಿಯ ಪ್ರಮಾಣ ವಚನ ಆಯೋಜಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಅದರಂತೆ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌, ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌, ಬಿಎಸ್‌ಪಿ ನಾಯಕಿ ಮಾಯಾವತಿ ಸೇರಿದಂತೆ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಈ ಆಹ್ವಾನಕ್ಕೆ ಮಾಯಾವತಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಖೀಲೇಶ್‌ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಮಮತಾ ಬ್ಯಾನರ್ಜಿ ಬರುತ್ತಿಲ್ಲ. ಆದರೆ ಅವರು ತಮ್ಮ ಪ್ರತಿನಿಧಿಯೊಬ್ಬರನ್ನು ಕಳುಹಿಸಿಕೊಡಲಿದ್ದಾರೆ. 

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನೆದುರಿಸಲು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ರಚಿಸಲು ಉದ್ದೇಶಿಸಿರುವ ಮಹಾ ಮೈತ್ರಿಕೂಟದ ಬಲವರ್ಧನೆಗೆ ಈ ಪ್ರಮಾಣ ವಚನ ಕಾರ್ಯಕ್ರಮ ನೆರವಾಗುವಂತೆ ಮಾಡುವುದು ಕಾಂಗ್ರೆಸ್‌ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next