ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಹಲವಾರು ಹೊಸ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಿದ್ದಾರಲ್ಲದೆ ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ನಿರೀಕ್ಷೆಯಂತೆಯೇ 52,000ಕೋ. ರೂ.ಗಳಷ್ಟು ಬೃಹತ್ ಮೊತ್ತವನ್ನು ಮೀಸಲಿರಿಸಿದ್ದಾರೆ.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ “ಕರ್ನಾಟಕ ಮಾದರಿ ಅಭಿವೃದ್ಧಿ’ಯ ವಿನೂತನ ಚಿಂತನೆಯ ಬೀಜವನ್ನು ಬಿತ್ತಿದ್ದಾರೆ. ತಮ್ಮ ಬಜೆಟ್ ಭಾಷಣದ ಆರಂಭದಲ್ಲೇ ತಮ್ಮ ನೇತೃತ್ವದ ಸರಕಾರ ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡು ಇದನ್ನು ಬಿಟ್ಟಿ ಯೋಜನೆ ಗಳೆಂದು ಟೀಕಿಸುವವರೇ ಈಗ ಗ್ಯಾರಂಟಿ ಯೋಜನೆಗಳ ಬೆನ್ನು ಬಿದ್ದಿದ್ದಾರೆ ಎನ್ನುವ ಮೂಲಕ ವಿಪಕ್ಷಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಜಿಎಸ್‌ಟಿ ಯ ಅವೈಜ್ಞಾನಿಕ ಅನುಷ್ಠಾನ, ಸೆಸ್, ಮತ್ತು ಸರ್‌ಚಾರ್ಜ್‌ಗಳ ಹೆಚ್ಚಳ, ತೆರಿಗೆ ಹಂಚಿಕೆಯ ಸೂತ್ರ ಬದಲಾವಣೆಯ ಕಾರಣಗಳಿಂದಾಗಿ ರಾಜ್ಯ ಗಳಿಗೆ ಕೇಂದ್ರದಿಂದ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನ ಬಿಡುಗಡೆ ಯಾಗುತ್ತಿಲ್ಲ. ಇನ್ನು 15ನೇ ಹಣಕಾಸು ಆಯೋಗದ ವರದಿಯಲ್ಲಿ ಲೋಪ ಗಳಾಗಿದ್ದು, ಈ ಹಿಂದಿನ ರಾಜ್ಯ ಸರಕಾರ ಇತ್ತ ಆಯೋಗದ ಗಮನ ಸೆಳೆಯು ವಲ್ಲಿ ವಿಫಲವಾಗಿತ್ತು. ಹೀಗಾಗಿ ಇಲ್ಲಿಯೂ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಭವಿಷ್ಯದಲ್ಲಿ ಇಂತಹ ಅನ್ಯಾಯವಾಗದಂತೆ ಸಚಿವ ಸಂಪುಟದ ಮಾರ್ಗದರ್ಶನದೊಂದಿಗೆ ವಿಷಯತಜ್ಞರನ್ನು ಒಳಗೊಂಡ ತಾಂತ್ರಿಕ ಕೋಶ ರಚಿಸಿ, 16ನೇ ಹಣಕಾಸು ಆಯೋಗಕ್ಕೆ ಸೂಕ್ತ ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು ಎಂದು ಪ್ರಕಟಿಸುವ ಮೂಲಕ ಅನುದಾನ ಹಂಚಿಕೆ ತಾರತಮ್ಯ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ನಡೆಯುತ್ತಿರುವ ತಿಕ್ಕಾಟವನ್ನು ಭಾಷಣದ ವೇಳೆ ಪ್ರಸ್ತಾವಿಸಿ, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಯವರು, 1,20,373 ಕೋ.ರೂ.ಗಳನ್ನು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಂಚಿಕೆ ಮಾಡಿದ್ದಾರೆ. ವಿತ್ತೀಯ ಕೊರತೆಯನ್ನು ನಿಗದಿತ ಮಿತಿಯಲ್ಲಿರಿಸಿ ಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಾಲದ ಮೊರೆ ಹೋಗಲು ನಿರ್ಧರಿಸಿರುವುದು ರಾಜ್ಯದ ಬೊಕ್ಕಸದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿರುವುದು ಸುಳ್ಳಲ್ಲ. ಆಯವ್ಯಯದಲ್ಲಿ ಬಹುತೇಕ ಇಲಾಖೆ, ವಲಯ ಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಾದೇಶಿಕವಾರು ಹಂಚಿಕೆಯಲ್ಲೂ ಸಾಧ್ಯವಾದಷ್ಟು ಸಮತೋ ಲನ ಕಾಯ್ದುಕೊಳ್ಳಲು ಸಿಎಂ ಕಸರತ್ತು ನಡೆಸಿದ್ದಾರೆ. ಜನ ಕಲ್ಯಾಣ ಯೋಜನೆಗಳ ವಿಸ್ತರಣೆ, ಈ ಹಿಂದಿನ ಕಾಂಗ್ರೆಸ್ ಸರಕಾರದ ಕೆಲವು ಜನಪ್ರಿಯ ಯೋಜನೆಗಳ ಪುನರಾರಂಭದ ಜತೆಯಲ್ಲಿ ಇನ್ನಷ್ಟು ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಸ್ತಾವಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಅಹಿಂದ ವರ್ಗಗಳಿಗೆ ಹಲವು ಕೊಡುಗೆಗಳನ್ನು ಘೋಷಿಸಿರುವ ಮುಖ್ಯಮಂತ್ರಿ, ಮುಂಬ ರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರುವುದು ಸ್ಪಷ್ಟ.
ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಹೊಸದಾಗಿ ಪ್ರಕಟಿಸಲಾಗಿರುವ ಕೆಲವು ಯೋಜನೆಗಳಿಗೆ ಅನುದಾನವನ್ನು ಹಂಚಿಕೆ ಮಾಡದೇ ಇರುವುದರಿಂದ ಇವು ಘೋಷಣೆಗಷ್ಟೆ ಸೀಮಿತವಾಗಲಿದೆಯೇ ಎಂಬ ಅನುಮಾನ ಜನತೆಯನ್ನು ಕಾಡುವಂತೆ ಮಾಡಿರುವುದು ಸುಳ್ಳಲ್ಲ.