ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಮೂರೂ ರಾಜಕೀಯ ಪಕ್ಷಗಳಿಗೆ ಸಂಖ್ಯಾಬಲ ಮತ್ತು ಪಕ್ಷ ಸಂಘಟನೆ ದೃಷ್ಟಿಯಿಂದ ಮುಖ್ಯವಾಗಿದೆ. ಆಡಳಿತಾ ರೂಢ ಬಿಜೆಪಿಗೆ ಮತ್ತು ವಿಪಕ್ಷ ಕಾಂಗ್ರೆಸ್‌ಗೆ ಚುನಾವಣೆ ಪ್ರತಿಷ್ಠೆಯಾಗಿದ್ದರೆ, ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ.
ಬಿಜೆಪಿ: ಬಿಜೆಪಿ ಪ್ರಸ್ತುತ ವಿಧಾನಪರಿಷತ್‌ನಲ್ಲಿ 32 ಸಂಖ್ಯಾಬಲ ಹೊಂದಿದ್ದು, ಬಹುಮತಕ್ಕೆ 38 ಸ್ಥಾನ ಬೇಕಿದೆ. ಬಹುಮತ ಬಂದರೆ ಸಭಾಪತಿ ಮತ್ತು ಉಪ ಸಭಾಪತಿ ಹುದ್ದೆಗಳನ್ನು ಹೊಂದಬಹುದು. ಚುನಾವಣೆ ನಡೆಯುತ್ತಿರುವ 25 ಸ್ಥಾನಗಳಲ್ಲಿ ಬಿಜೆಪಿ ಬಲ ಇರುವುದು 6. ಆದರೆ ಈಗ 15 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಕನಿಷ್ಠ ದುಪ್ಪಟ್ಟು ಅಂದರೆ 12 ಸ್ಥಾನವಾದರೂ ಪಡೆದರೆ ಬಹುಮತದ ಗಡಿ ತಲುಪಬಹುದು ಎಂಬುದು ಆ ಪಕ್ಷದ ಲೆಕ್ಕಾಚಾರ. ಹೀಗಾಗಿ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಗೆಲುವಿಗಾಗಿ ನಾನಾ ತಂತ್ರಗಾರಿಕೆ ಹೆಣೆದಿದ್ದಾರೆ.
ಕಾಂಗ್ರೆಸ್: ವಿಪಕ್ಷ ಕಾಂಗ್ರೆಸ್ 29 ಸಂಖ್ಯಾಬಲ ಹೊಂದಿದ್ದು, ಇದು ಕುಸಿಯದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದೆ. ಇಲ್ಲಿ ಹಿನ್ನಡೆ
ಯುಂಟಾದರೆ ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಹೀಗಾಗಿ ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲರೂ ಪ್ರಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕೆಲವೆಡೆ ಹಿರಿಯ ನಾಯಕರ ಮಾತಿಗೆ ವಿರುದ್ಧವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದರಿಂದ ಪಕ್ಷಕ್ಕೆ ಒಳಏಟು ಬೀಳಬಹುದು ಎಂಬ ಆತಂಕವಿದೆ. ಚುನಾವಣೆ ನಡೆಯುತ್ತಿರುವ 25ರಲ್ಲಿ ಕಾಂಗ್ರೆಸ್ ಬಲ ಇರುವುದು 14. ಅಷ್ಟೂ ಗೆಲ್ಲಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆಯಾದರೂ ಕನಿಷ್ಠ 10 ಕ್ಷೇತ್ರವಾದರೂ ಗೆದ್ದರೆ ಸಮಾಧಾನ.
ಜೆಡಿಎಸ್: ಜೆಡಿಎಸ್ ಪ್ರಸ್ತುತ 12 ಸಂಖ್ಯಾಬಲ ಹೊಂದಿದೆ. ಆರು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಗೆಲ್ಲುವ ಅವಕಾಶ ಇರುವ ಕಡೆ ಹೋರಾಡುತ್ತಿದೆ. ಜೆಡಿಎಸ್ ಸ್ಪರ್ಧಿಸಿರುವುದು ತನ್ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ, ಹಾಸನ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿ. ಇಲ್ಲಿ ಗೆಲ್ಲುವ ಮೂಲಕ ಜೆಡಿಎಸ್‌ಗೆ ಅಸ್ತಿತ್ವ ಉಳಿಸಿಕೊಳ್ಳಬೇಕಾದ
ಸವಾಲಿದೆ. ಚುನಾವಣೆ ನಡೆಯುತ್ತಿರುವ 25 ಕ್ಷೇತ್ರಗಳಲ್ಲಿ ಜೆಡಿಎಸ್ ಬಲ 4, ಸ್ಪರ್ಧಿಸಿರುವ 6 ಕ್ಷೇತ್ರ ಗೆಲ್ಲುವ ಗುರಿ ಆ ಪಕ್ಷದ್ದು.
ಸಂಖ್ಯಾಬಲ :
75 :ವಿಧಾನ ಪರಿಷತ್ ಬಲ
ಬಿಜೆಪಿ : 32
ಕಾಂಗ್ರೆಸ್: 29
ಜೆಡಿಎಸ್ :12
ಪಕ್ಷೇತರ: 01
ಸಭಾಪತಿ: 01
ಇಂದು ಮತದಾನ :
ವಿಧಾನಪರಿಷತ್‌ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣೆಗೆ ಶುಕ್ರವಾರ, ಡಿ. 10 ರಂದು ಮತದಾನ ನಡೆಯಲಿದ್ದು, ಒಟ್ಟು 99 ಸಾವಿರ ಮತದಾರರು ಕಣದಲ್ಲಿರುವ 90 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಬೆಳಿಗ್ಗೆ 8ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಕಣದಲ್ಲಿ 89 ಪುರುಷರು, ಒಬ್ಬ ಮಹಿಳೆ ಇದ್ದಾರೆ. ಇವರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 20, ಜೆಡಿಎಸ್‌ನ 6, ಇತರ ಪಕ್ಷಗಳ 11 ಹಾಗೂ ಪಕ್ಷೇತರರು 33 ಮಂದಿ ಅಭ್ಯರ್ಥಿಗಳು ಇದ್ದಾರೆ.