ಬೆಂಗಳೂರು: ವಿಧಾನಪರಿಷತ್ ನ 2 ಶಿಕ್ಷಕರು ಹಾಗೂ 2 ಪದವೀಧರರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ (ಜೂನ್ 15) ಬೆಳಗ್ಗೆ ಆರಂಭಗೊಂಡಿದೆ. ಸಂಜೆಯೊಳಗೆ ನಾಲ್ಕು ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಲೋಕಾಯುಕ್ತರಾಗಿ ನ್ಯಾ. ಬಿ.ಎಸ್. ಪಾಟೀಲ್ ಪ್ರಮಾಣ ವಚನ ಸ್ವೀಕಾರ
ವಾಯುವ್ಯ ಪದವೀಧರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರ ಮತ್ತು ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆದಿದೆ. ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಎಣಿಕೆ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ನಡೆಯುತ್ತಿದೆ.
ದಕ್ಷಿಣ ಪದವೀಧರ ಕ್ಷೇತ್ರದ ಮತಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ನಡೆಯುತ್ತಿದೆ. ಆಡಳಿತಾರೂಢ ಬಿಜೆಪಿಯ 4 ಅಭ್ಯರ್ಥಿಗಳು, ವಿಪಕ್ಷ ಕಾಂಗ್ರೆಸ್ ನ 04 ಅಭ್ಯರ್ಥಿ, ಪಕ್ಷೇತರರು 33 ಸೇರಿದಂತೆ ಒಟ್ಟು 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಾಲ್ಕು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್ ನಲ್ಲಿ ಆಡಳಿತಾರೂಢ ಬಿಜೆಪಿ ಬಹುಮತ ಪಡೆಯಲಿದೆಯೇ ಎಂಬುದು ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ. 75 ಸದಸ್ಯ ಬಲದ ವಿಧಾನಪರಿಷತ್ ನಲ್ಲಿ ಬಹುಮತಕ್ಕೆ 38 ಸದಸ್ಯಬಲದ ಅಗತ್ಯವಿದೆ. ಪ್ರಸ್ತುತ ಬಿಜೆಪಿ ಸದಸ್ಯ ಬಲ 36 ಇದ್ದು, ಕಾಂಗ್ರೆಸ್ 24, ಜೆಡಿಎಸ್ 7 ಸದಸ್ಯ ಬಲ ಹೊಂದಿದೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಪರಿಷತ್ ನ ಹಾಲಿ ಸದಸ್ಯ ಹಣಮಂತ ನಿರಾಣಿ, ಕಾಂಗ್ರೆಸ್ ಅಭ್ಯರ್ಥಿ ಸುನೀಲ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಂವಿ ರವಿಶಂಕರ್, ಕಾಂಗ್ರೆಸ್ ನ ಜಿ.ಎಂ ಮಧು, ಜೆಡಿಎಸ್ ಅಭ್ಯರ್ಥಿ ಎಚ್ ಕೆ ರಾಮು, ಕನ್ನಡ ಚಳವಳಿ ಪಕ್ಷದಿಂದ ವಾಟಾಳ್ ನಾಗರಾಜ್ ಕಣದಲ್ಲಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಬಸವರಾಜ ಹೊರಟ್ಟಿ, ಜೆಡಿಎಸ್ ನ ಶ್ರೀಶೈಲ ಗಡದಿನ್ನಿ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಕಣದಲ್ಲಿದ್ದು, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಅರುಣ್ ಶಹಾಪುರ, ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ, ಜೆಡಿಎಸ್ ನ ಚಂದ್ರಶೇಖರ್ ಲೋಣಿ ಅಖಾಡದಲ್ಲಿದ್ದಾರೆ.