ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನದ ಕಲಾಪವನ್ನು ಐದು ದಿನ ಮೊಟಕುಗೊಳಿಸಲಾಗಿದೆ. ಅಧಿವೇಶನ ಫೆ.28 ರವರೆಗೂ ನಿಗದಿಯಾಗಿತ್ತಾದರೂ ಫೆ.23ಕ್ಕೆ ಮುಗಿಸಲು ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ವಿಧಾನಸಭೆಯಲ್ಲಿ ಮಂಗಳವಾರ ಈ ಕುರಿತು ಪ್ರಕಟಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಲಿದ್ದಾರೆ. ಫೆ.23 ರವರೆಗೆ ವಿಧೇಯಕಗಳ ಮಂಡನೆ ಹಾಗೂ ಪರ್ಯಾಲೋಚನೆ, ಫೆ. 22ರವರೆಗೆ ಬಜೆಟ್ ಮೇಲಿನ ಚರ್ಚೆ, ಫೆ.23ರಂದು ಮುಖ್ಯಮಂತ್ರಿಯವರಿಂದ ಉತ್ತರ ಹಾಗೂ ಸದನ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಯಿತು.
ವಿಧಾನಮಂಡಲ ಕಲಾಪ ಐದು ದಿನ ಮೊಟಕುಗೊಳಿಸುವ ಬಗ್ಗೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು. ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕೆಂದು ನಾವೇ ನಿಯಮ ಮಾಡಿಕೊಂಡಿದ್ದೇವೆ. ಆದರೆ, ಕಳೆದ ಐದೂ ವರ್ಷಗಳಲ್ಲಿ ಒಮ್ಮೆಯೂ ಇದು ಪಾಲನೆಯಾಗಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಕಲಾಪ ಸಲಹಾ ಸಮಿತಿಯಲ್ಲಿ ನಿಮ್ಮ ಗಮನಕ್ಕೆ ತಂದೇ ತೀರ್ಮಾನಿಸಿದ್ದೇವೆ.
ಎಲ್ಲ ಪಕ್ಷಗಳಿಗೂ ಚುನಾವಣಾ ಸಭೆಗಳು ಇರುವುದರಿಂದ ಫೆ.23ಕ್ಕೆ ಮುಗಿಸೋಣ. ಅಷ್ಟರಲ್ಲಿ ಎಲ್ಲ ವಿಷಯ ಚರ್ಚಿಸೋಣವೆಂದು ವಿಷಯಕ್ಕೆ ತೆರೆ ಎಳೆದರು.
ರಾಹುಲ್ ಪ್ರವಾಸ ಹಿನ್ನೆಲೆ: ಎಐಸಿಸಿ ಅಧ್ಯಕ್ಷ ರಾಹುಲ್ ಫೆ.24 ರಿಂದ ಮುಂಬೈ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಅಧಿವೇಶನದ ಅವಧಿ ಮೊಟಕುಗೊಳಿಸಲಾಗಿದೆ ಎಂದು ಹೇಳಲಾಗಿದೆ.