Advertisement

ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಕರ್ನಾಟಕ

01:23 AM Dec 20, 2019 | Team Udayavani |

ಹುಬ್ಬಳ್ಳಿ: ಶ್ರೇಯಸ್‌ ಗೋಪಾಲ್‌ ಮತ್ತು ಅಭಿಮನ್ಯು ಮಿಥುನ್‌ ಕೆಳ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಉತ್ತರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕಕ್ಕೆ ಮಹತ್ವದ ಇನ್ನಿಂಗ್ಸ್‌ ಮುನ್ನಡೆ ತಂದಿತ್ತಿದ್ದಾರೆ. ಯುಪಿಯ 281ಕ್ಕೆ ಉತ್ತರವಾಗಿ ಕರ್ನಾಟಕ 321 ರನ್‌ ಗಳಿಸಿತು.

Advertisement

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರಪ್ರದೇಶ 3ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 29 ರನ್‌ ಮಾಡಿದೆ. ಶುಕ್ರವಾರ ಅಂತಿಮ ದಿನವಾಗಿದ್ದು, ಪಂದ್ಯ ಸ್ಪಷ್ಟ ಫ‌ಲಿತಾಂಶ ಕಾಣುವ ಸಂಭವ ಕಡಿಮೆ ಎಂದೇ ಹೇಳಬಹುದು.

4ಕ್ಕೆ 168 ರನ್‌ ಮಾಡಿದಲ್ಲಿಂದ ಗುರುವಾರದ ಆಟ ಮುಂದುವರಿಸಿದ ಕರ್ನಾಟಕ, 222ಕ್ಕೆ ತಲಪುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿತು. ಅಭಿಷೇಕ್‌ ರೆಡ್ಡಿ (32), ಬಿ.ಆರ್‌. ಶರತ್‌ (16) ಮತ್ತು ಡೇವಿಡ್‌ ಮಥಾಯಿಸ್‌ (4) ಬೇಗನೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡಾಗ ಇನ್ನಿಂಗ್ಸ್‌ ಹಿನ್ನಡೆಯ ಭೀತಿ ಎದುರಾಯಿತು.

ಆದರೆ ಇನ್ನೊಂದು ತುದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಶ್ರೇಯಸ್‌ ಗೋಪಾಲ್‌ ಮತ್ತು ಜಗದೀಶ್‌ ಸುಚಿತ್‌ ಸೇರಿಕೊಂಡು ಹೋರಾಟವೊಂದನ್ನು ಸಂಘಟಿಸಿದರು. 8ನೇ ವಿಕೆಟಿಗೆ 57 ರನ್‌ ಹರಿದು ಬಂತು. ಈ ಜೋಡಿ ಬೇರ್ಪಡುವಾಗ ಕರ್ನಾಟಕದ ಮುನ್ನಡೆಗೆ ಕೇವಲ 3 ರನ್‌ ಅಗತ್ಯವಿತ್ತು.

ಮಿಥುನ್‌ ಬಿರುಸಿನ ಆಟ
ಅನಂತರ ಕ್ರೀಸ್‌ ಇಳಿದ ಮಿಥುನ್‌ ಬಿರುಸಿನ ಆಟಕ್ಕೆ ಮುಂದಾದರು. 48 ಎಸೆತಗಳಿಂದ ಅಜೇಯ 34 ರನ್‌ (3 ಬೌಂಡರಿ, 1 ಸಿಕ್ಸರ್‌) ಮಾಡಿ ತಂಡದ ಮೊತ್ತವನ್ನು 320ರ ಗಡಿ ದಾಟಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ ಮಿಥುನ್‌ 6 ವಿಕೆಟ್‌ ಉಡಾಯಿಸಿದ್ದರು.

Advertisement

ಶ್ರೇಯಸ್‌ ಗೋಪಾಲ್‌ ಕೊಡುಗೆ 58 ರನ್‌. 182 ಎಸೆತಗಳ ಈ ಜವಾಬ್ದಾರಿಯುತ ಆಟದಲ್ಲಿ 6 ಬೌಂಡರಿ ಒಳಗೊಂಡಿತ್ತು. ಸುಚಿತ್‌ ಅವರ 28 ರನ್‌ 120 ಎಸೆತಗಳಿಂದ ಬಂತು (2 ಬೌಂಡರಿ).

ಉತ್ತರಪ್ರದೇಶ 2ನೇ ಹೊಸ ಚೆಂಡನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫ‌ಲವಾಯಿತು. ಗಾಯಾಳು ಬೌಲರ್‌, ನಾಯಕ ಅಂಕಿತ್‌ ರಜಪೂತ್‌ ಶಾರ್ಟ್‌ ರನ್‌ಅಪ್‌ನಿಂದಾಗಿ ವೈಫ‌ಲ್ಯ ಕಂಡರು. ಸೌರಭ್‌ ಕುಮಾರ್‌ 6 ವಿಕೆಟ್‌ ಉಡಾಯಿಸಿದರೂ ಕರ್ನಾಟಕದ ಮುನ್ನಡೆಯನ್ನು ತಡೆಯಲು ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌: ಉತ್ತರಪ್ರದೇಶ-281 ಮತ್ತು ಒಂದು ವಿಕೆಟಿಗೆ 29. ಕರ್ನಾಟಕ-321 (ಪಡಿಕ್ಕಲ್‌ 74, ಗೋಪಾಲ್‌ 58, ಮಿಥುನ್‌ ಔಟಾಗದೆ 34, ಸೌರಭ್‌ 116ಕ್ಕೆ 6).

Advertisement

Udayavani is now on Telegram. Click here to join our channel and stay updated with the latest news.

Next