Advertisement

2018ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ

06:00 AM Sep 28, 2018 | |

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಮೈಸೂರಿನ ಎಸ್‌.ಎಂ.ಜಂಬುಕೇಶ್ವರ,
ಧಾರವಾಡದ ಮಧು ದೇಸಾಯಿ ಹಾಗೂ ಉಡುಪಿಯ ಉಪಾಧ್ಯಾಯ ಮೂಡುಬೆಳ್ಳೆ ಅವರಿಗೆ ಲಭಿಸಿವೆ.

Advertisement

ಗುರುವಾರ ಕನ್ನಡ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಾಲಾಕ್ಷಿ ಮಾತನಾಡಿ, ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಚಿತ್ರಕಲೆಯಲ್ಲಿ ಮೂವರು ಶ್ರೇಷ್ಠ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುತ್ತಿದೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ.ನಗದು ಒಳಗೊಂಡಿದೆ ಎಂದರು.

ಈ ಬಾರಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಎಸ್‌.ಎಂ.ಜಂಬುಕೇಶ್ವರ ಅವರು ಚಿತ್ರಕಲೆಯ ಜತೆಗೆ ಛಾಯಾಗ್ರಹಣವನ್ನೂ ಮಾಡುತ್ತಿದ್ದು, ದೇಶ, ವಿದೇಶಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ. ಮಧು ದೇಸಾಯಿ ಅವರು, ಕಲಾಮಂಡಲ ಸಂಸ್ಥೆಯ ಸ್ಥಾಪಕರಾಗಿ ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ. ಉಪಾಧ್ಯಾಯ ಮೂಡುಬೆಳ್ಳೆ ಅವರು ವಿವಿಧ ದೇವಾಲಯ, ರಥಗಳ ವರ್ಣಚಿತ್ರ ರಚನೆಯಲ್ಲಿ ಸಿದ್ಧಹಸ್ತರಾಗಿದ್ದಾರೆ ಎಂದರು.

47ನೇ ವಾರ್ಷಿಕ ಕಲಾ ಬಹುಮಾನ: ಬಾಗಲಕೋಟೆಯ ಇಂದ್ರಕುಮಾರ ಬಿ.ದಸ್ತೇನವರ, ಹಾವೇರಿಯ ಕರಿಯಪ್ಪ ಹಂಚಿನಮನಿ,
ಬೆಳಗಾವಿಯ ಶಂಕರ ಬಿ.ಲೋಹಾರ, ಶಿವಮೊಗ್ಗದ ಕೋಟೆಗದ್ದೆ ಎಸ್‌.ರವಿ,ಹುಬ್ಬಳ್ಳಿಯ ಗಣೇಶ ಎಸ್‌.ಸಾಬೋಜಿ, ಮಂಡ್ಯದ ವಿ.ಇ.ಅಕ್ಷಯ್‌ ಕುಮಾರ್‌, ಬೆಂಗಳೂರಿನ ಆರ್‌.ವೆಂಕಟರಾಮನ್‌ ಮತ್ತು ಬಾಗೂರು ಮಾರ್ಕಾಂಡೇಯ ಹಾಗೂ ಕಲಬುರಗಿಯ ಡಾ.ಸುಬ್ಬಯ್ಯ.ಎಂ.ನೀಲಾ ಮತ್ತು ಶ್ರೀಶೈಲ ಗುಡೇದ ಅವರ ಕಲಾಕೃತಿಗಳು 47ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ 25 ಸಾವಿರ ರೂ.ನಗದನ್ನು ಒಳಗೊಂಡಿದೆ ಎಂದು ತಿಳಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅ.4ರಂದು ಸಂಜೆ 4.30ಕ್ಕೆ 47ನೇ ವಾರ್ಷಿಕ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಹಾಗೂ ಕಲಾವಿದ ಎಸ್‌.ಜಿ.ವಾಸುದೇವ್‌ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ಅ.5ರಂದು ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಗೌರವ ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕ ಕಲಾಪ್ರದರ್ಶನ ಬಹುಮಾನ ಪ್ರದಾನ ಮಾಡಲಿದ್ದಾರೆ. ದಿ ಐಡಿಯಲ್‌ ಫೈನ್‌ ಆರ್ಟ್‌ ಸೊಸೈಟಿಯ ಕಾರ್ಯದರ್ಶಿ ಡಾ.ವಿ.ಜಿ.ಅಂದಾನಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಹಿರಿಯ ಕಲಾವಿದರಿಗೆ ಸೀನಿಯರ್‌ ಫೆಲೋಶಿಪ್‌ ಆಗಿ ಎರಡು ಲಕ್ಷ ರೂ.ಗಳನ್ನು ನೀಡಿ, ಅವರಿಂದ ಅವರ ಜೀವನಾನುಭವವನ್ನು ಆಧರಿಸಿದ ಎರಡು ಕಲಾಕೃತಿಗಳನ್ನು ಅಕಾಡೆಮಿಯ ಸಂಗ್ರಹಕ್ಕೆ ಪಡೆದುಕೊಳ್ಳಲಾಗುವುದು. 2017ನೇ ಸಾಲಿನಲ್ಲಿ ನಾಡೋಜ ಖಂಡೇರಾವ್‌ ಹಾಗೂ ಮೈಸೂರಿನ ಜಿ.ಎಲ್‌.ನರಸಿಂಹ ಅವರಿಗೆ ಸೀನಿಯರ್‌ ಫೆಲೋಶಿಪ್‌ ನೀಡಲು ಉದ್ದೇಶಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next