ಉಳ್ಳಾಲ: ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಎರಡು ಕೋವಿಡ್ 19 ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಕರ್ನಾಟಕ- ಕೇರಳ ನಡುವಿನ ಸಂಚಾರ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ. ಇದೇ ಕಾರಣದಿಂದ ಗಡಿ ಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ಪೊಲೀಸರು ಮತ್ತು ವಾಹನ ಸವಾರರ ನಡುವೆ ಮಾತಿಕ ಚಕಮಕಿಯೂ ನಡೆಯಿತು.
ಕೇರಳದಿಂದ ಕರ್ನಾಟಕಕ್ಕೆ ಬರುವ ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಆದರೆ ಕರ್ನಾಟಕದಿಂದ ಕೇರಳ ಕಡೆಗೆ ಹೋಗುವ ವಾಹನಗಳಿಗೆ ಅವಕಾಶ ನೀಡಲಾಗಿದೆ. ಗೂಡ್ಸ್ ಲಾರಿಗಳು ಓಡಾಡುತ್ತಿದೆ
ಸ್ಥಳದಲ್ಲಿ ಕೆಎಸ್ ಆರ್ ಪಿ, ಕೇರಳ ಪೊಲೀಸರು ಮತ್ತು ಕರ್ನಾಟಕ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಕೆಲವು ವಾಹನಗಳಿಗೆ ತಡೆಯೊಡ್ಡಿದ್ದರಿಂದ ಚಾಲಕರು ಪರದಾಡುತ್ತಿದ್ದು, ಪೊಲೀಸರೊಂದಿಗೆ ಚರ್ಚೆಗೂ ಇಳಿದ ಪ್ರಸಂಗ ನಡೆಯಿತು.
ಒಳ ರಸ್ತೆಯಲ್ಲಿ ಪ್ರಯಾಣಿಕರು
ಗಡಿಭಾಗದ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿರುವ ಕಾರಣ ಕೇರಳದ ವಾಹನಗಳು ಒಳರಸ್ತೆಯಲ್ಲಿ ಸಂಚಾರ ಆರಂಭಿಸಿದ್ದವು. ಆದರೆ ಇದಕ್ಕೆ ಅವಕಾಶ ನೀಡದ ಸ್ಥಳೀಯರು ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನಿಟ್ಟ ಪ್ರಸಂಗ ನಡೆಯಿತು.