Advertisement

ಕರ್ನಾಟಕ –ಕೇರಳ ಬಸ್‌ಗಳ ಸಂಚಾರ ಸದ್ಯಕ್ಕಿಲ್ಲ

02:48 AM Oct 30, 2021 | Team Udayavani |

ಮಂಗಳೂರು: ಕರ್ನಾಟಕ-ಕೇರಳ ಅಂತಾರಾಜ್ಯ ಬಸ್‌ ಸಂಚಾರ ಸದ್ಯಕ್ಕೆ ಪುನರಾರಾಂಭ ಅನುಮಾನ. ಇನ್ನೂ ಕನಿಷ್ಠ ಒಂದು ವಾರ ಯಥಾ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

Advertisement

ನ. 1ರಿಂದ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಬಸ್‌ ಸಂಚಾರ ಪುನರಂಭವಾಗುವ ಸಾಧ್ಯತೆ ಇದೆ ಎಂದು ಸಾಮಾಜಕ ಜಾಲ ತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಆದರೆ ದ.ಕ. ಜಿಲ್ಲಾಡಳಿತ ಇನ್ನೂ ಒಂದು ವಾರ ಕಾಲ ಅಂತಾರಾಜ್ಯ ಬಸ್‌ ಸಂಚಾರ ಆರಂಭವಾಗದು ಎಂದು ತಿಳಿಸಿದೆ.

ಕರ್ನಾಟಕ-ಕೇರಳ ಅಂತಾರಾಜ್ಯ ಬಸ್‌ ಸಂಚಾರ ನಿರ್ಬಂಧದ ನಡುವೆಯೇ ಅ. 25ರಿಂದ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆ ಸಹಿತ ಎಲ್ಲ ಶಾಲಾ ಮತ್ತು ಕಾಲೇಜು ತರಗತಿಗಳು ಆರಂಭವಾಗಿವೆ.

ಗಡಿ ಭಾಗದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕೇರಳ ಭಾಗದ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುವುದಾದರೆ ಕೊರೊನಾ ನೆಗೆಟಿವ್‌ ಪ್ರಮಾಣಪತ್ರ ಹಾಜರುಪಡಿಸಿಯೇ ಕರ್ನಾಟಕ ಪ್ರವೇಶಿಸ ಬೇಕಾದ ಅನಿವಾರ್ಯತೆ ಇದೆ.

ದ.ಕ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಾಸರಗೋಡು ಭಾಗದಿಂದ ಬರುವ 2,000ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರು ಕಡ್ಡಾಯವಾಗಿ ತರಗತಿಗೆ ಹಾಜರಾಗಲೇ ಬೇಕೆಂದಿಲ್ಲ. ಆನ್‌ಲೈನ್‌ ತರಗತಿಗಳಿಗೂ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಆದರೂ ಕಳೆದ ಸುಮಾರು ಒಂದುವರೆ ವರ್ಷದಿಂದ ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಇದೀಗ ತರಗತಿಗೆ ಹಾಜರಾಗುವ ಇಂಗಿತ ವ್ಯಕ್ತಪಡಿಸುತ್ತಾರೆ. ಹೆತ್ತವರಲ್ಲೂ ಮಕ್ಕಳನ್ನು ಶಾಲೆಗೆ ಕಳುಹಿಸ ಬೇಕೆಂಬ ಇರಾದೆ ಇದೆ.

Advertisement

ಇದನ್ನೂ ಓದಿ:ಈ ರಾಜ್ಯದಲ್ಲಿ ಎಂಬಿಬಿಎಸ್‌ ಶುಲ್ಕ 4.5 ಲಕ್ಷ ರೂ.ನಿಂದ 1.5 ಲಕ್ಷಕ್ಕೆ ಇಳಿಕೆ

ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 10ರಿಂದ ಶೇ. 14ರಷ್ಟಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದಕ್ಕಿಂತ ಸ್ವಲ್ಪ ಕಡಿಮೆ ಇದೆ. ದ.ಕ.ದಲ್ಲಿ ಪಾಸಿಟಿವಿಟಿ ದರ ಶೇ. 0.40- 0.45ರ ಆಸುಪಾಸಿನಲ್ಲಿದೆ.

ಕೇರಳದ ಅಭ್ಯಂತರವಿಲ್ಲ
ಕರ್ನಾಟಕದ ಬಸ್‌ಗಳು ರಾಜ್ಯ ಪ್ರವೇಶಿಸುವುದಕ್ಕಾಗಲೀ ನಮ್ಮ ಬಸ್‌ಗಳನ್ನು ಕರ್ನಾಟಕಕ್ಕೆ ಬಿಡುವುದಕ್ಕಾಗಲೀ ನಮ್ಮದೇನೂ ಅಭ್ಯಂತರ ವಿಲ್ಲ. ಕರ್ನಾಟಕ ಸರಕಾರದ ನಿಷೇಧದಿಂದಾಗಿಬಸ್‌ಗಳು ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಸರಕಾರವು ಅವಕಾಶ ನೀಡಿದ ಕೂಡಲೇ ನಮ್ಮಲ್ಲಿಂದ ಬಸ್‌ಗಳನ್ನು ಆರಂಭಿಸಲಾಗುವುದು ಎಂದು ಕೇರಳ ಕೆಎಸ್ಸಾರ್ಟಿಸಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಪಾಸಿಟಿವಿಟಿ ದರ ಕನಿಷ್ಠ ಶೇ. 5ಕ್ಕಿಂತ ಕೆಳಗೆ ಬಾರದಿದ್ದರೆ ಅಂತಾರಾಜ್ಯ ಬಸ್‌ ಸಂಚಾರ ಆರಂಭಿಸಲು ಸಾಧ್ಯವಾಗದು. ಇನ್ನೂ ಒಂದು ವಾರ ಕಾದು ಪರಿಸ್ಥಿತಿ ಅವಲೋಕಿಸಿ ಯೋಗ್ಯ ತೀರ್ಮಾನ ಕೈಗೊಳ್ಳಲಾಗುವುದು.
ಡಾ| ರಾಜೇಂದ್ರ ಕೆ.ವಿ.,
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next