Advertisement

“ವಿದ್ಯಾಗಮವು ಗುರುಕುಲ ಪದ್ಧತಿಯನ್ನು ನೆನಪಿಸುತ್ತದೆ’

02:42 PM Aug 08, 2020 | mahesh |

ಬೆಂಗಳೂರು: ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯು ಗುರುಕುಲ ಮಾದರಿಯ ಶಾಲೆಗಳನ್ನು ನೆನಪಿಸುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶ್‌ ಕುಮಾರ್‌ ಹೇಳಿದರು. ಶುಕ್ರವಾರ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿಯಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಕುರಿತು ರಾಜ್ಯದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ
ವಿಧಾನಪರಿಷತ್‌ ಸದಸ್ಯರೊಂದಿಗೆ ಆನ್‌ಲೈನ್‌ ಮೂಲಕ ಸಂವಾದ ನಡೆಸಿದರು. ನಂತರ ಯೋಜನೆ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು, ಡಯಟ್‌ ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

Advertisement

ನಂತರ ಮಾತನಾಡಿ, ಕೋವಿಡ್ ಸಂದಿಗ್ಧತೆಯಲ್ಲಿ ವಿದ್ಯಾರ್ಥಿಗಳನ್ನು ಪಾಠ ಪ್ರವಚನಗಳತ್ತ ಸೆಳೆಯಲು ಜಾರಿಗೊಳಿಸಿರುವ ವಿದ್ಯಾಗಮ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತದೆ. ಈ ಮೂಲಕ ನಮ್ಮ ಸಂಸ್ಕೃತಿಯ ಪುನರುತ್ಥಾನವಾದಂತಾಗಿದೆ. ಈ ಯೋಜನೆ ಮೂಲಕ ಶಿಕ್ಷಣವು ನಮ್ಮ ಕಟ್ಟಕಡೆಯ ಹಳ್ಳಿ ಮಕ್ಕಳಿಗೂ ತಲುಪುವಂತೆ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜೆ. ಜಗದೀಶ್‌ ಅವರು ವಿದ್ಯಾಗಮ ಯೋಜನೆಯನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕು, ಅದಕ್ಕಾಗಿ ಅನುಸರಿಸಬೇಕಾದ ನಿಯಮಗಳು, ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಎಸ್‌ಎಸ್‌ಎ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್‌ ಇದ್ದರು.

ಪ್ರವೇಶದ ವೇಳೆ ಪ್ರಮಾಣ ಪತ್ರ ಕೇಳುವಂತಿಲ್ಲ
ರಾಜ್ಯದಲ್ಲಿ ಈಗಾಗಲೇ ಹತ್ತು ಲಕ್ಷ ವಿದ್ಯಾರ್ಥಿಗಳು ದಾಖಲಾಗಬೇಕಿತ್ತು. ಆದರೆ, ಕೊರೊನಾದಿಂದ ದಾಖಲಾತಿ ಪ್ರಕ್ರಿಯೆ ಅಷ್ಟೊಂದು ವೇಗವಾಗಿ ಸಾಗಿಲ್ಲ. ಆದ್ದರಿಂದ ಯಾವುದೇ ದಾಖಲೆಗಳನ್ನು ಅಪೇಕ್ಷಿಸದೇ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಬೇಕು. ಆ.10ರಿಂದ 15ರ ವರೆಗೆ ದಾಖಲಾತಿ ಅಂದೋಲನದ ಮಾದರಿಯಲ್ಲಿ ನಡೆಯಬೇಕು. ಆ ನಂತರವೂ ಮಕ್ಕಳನ್ನು ದಾಖಲಾತಿ ಪ್ರಕ್ರಿಯೆ ಮುಂದುವರಿಸಬೇಕು. ಮಕ್ಕಳ ಮನೆ ಮನೆಗೆ ಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಬೇಕು
ಎಂದು ಸಚಿವ ಸುರೇಶ್‌ ಕುಮಾರ್‌ ನಿರ್ದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next