ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯ ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ನೀಡುವ ಜತೆಗೆ ಜಲಸಂರಕ್ಷಣೆಗೆ ವಿಶೇಷ ಗಮನಹರಿಸಿದ್ದು, ಪ್ರಸಕ್ತ ವರ್ಷ ಜಲಸಂರಕ್ಷಣೆ ಕಾಯಕದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ.
ನರೇಗಾ ಕಾಮಗಾರಿಯ ಅನುಷ್ಠಾನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಪ್ರಸಕ್ತ 2021- 2022ನೇ ಸಾಲಿನಲ್ಲಿ ಜಲ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದೆ. ಇದರ ಪರಿಣಾಮ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಬೃಹತ್ ಪ್ರಗತಿ ಸಾಧಿಸಲಾಗಿದೆ.
ಅರಣ್ಯ ಪ್ರದೇಶದಲ್ಲಿ ಕೈಗೊಂಡ ಸಮಪಾತಳಿ ಬದುಗಳು, ರೈತರ ಜಮೀನಿನಲ್ಲಿ ಕಂದಕ ಬದುವು, ಕಲ್ಯಾಣಿಗಳ ಪುನಶ್ಚೇತನ, ಕೆರೆ ಅಭಿವೃದ್ಧಿ, ನದಿ ಪುನಶ್ಚೇತನ ಕಾಮಗಾರಿಗಳು ಜಲಸಂರಕ್ಷಣೆಯಲ್ಲಿ ಪ್ರಮುಖವಾಗಿವೆ. ಜಲಶಕ್ತಿ ಅಭಿಯಾನದಡಿ ಹಳ್ಳಿಗಳಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ನಾಲಾ ದುರಸ್ತಿ, ಕಲ್ಯಾಣಿ ದುರಸ್ತಿ, ಗೋಕಟ್ಟೆ ನಿರ್ಮಾಣ, ಮಳೆ ಕೊಯ್ಲು, ಚೆಕ್‌ಡ್ಯಾಂ ನಿರ್ಮಾಣ, ಇಂಗುಗುಂಡಿ ನಿರ್ಮಾಣ, ಜಲಮರುಪೂರಣ, ಅರಣ್ಯೀಕರಣ, ಕೃಷಿ ಹೊಂಡ, ಜಮೀನುಗಳಲ್ಲಿ ಬದುಹೊಂಡ ನಿರ್ಮಾಣ, ನಾಲಾ ಪುನಶ್ಚೇತನ, ತೆರೆದಬಾವಿ ಪುನಶ್ಚೇತನದಂತಹ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ಈ ಕಾಮಗಾರಿಗಳ ಅನುಷ್ಠಾನದ ಪರಿಣಾಮ ಹಿಂಗಾರಿನಲ್ಲಿ ಸುರಿದ ಮಳೆಯಿಂದ ಅಂತರ್ಜಲಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
692 ಕಲ್ಯಾಣಿಗಳ ಜೀರ್ಣೋದ್ಧಾರ: ಬಹು ವರ್ಷಗಳ ಹಿಂದೆ ಗ್ರಾಮಗಳಲ್ಲಿ ಜನರಿಗೆ ದೈನಂದಿನ ಬಳಕೆಗೆ ಅನುಕೂಲವಾಗಲು ದೊಡ್ಡ ದೊಡ್ಡ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು. ಹಲವು ಕಲ್ಯಾಣಿ ಗಳಿಗೆ ದೈವಿಕ ಭಾವನೆ ಹಾಗೂ ಪುರಾಣ ಇತಿಹಾಸ ಕೂಡ ಇದೆ. ಕ್ರಮೇಣ ಜನರು ಕಲ್ಯಾಣಿಗಳ ಬದಲಿಗೆ ಕೊಳವೆ ಬಾವಿಗಳನ್ನು ಹೆಚ್ಚಾಗಿ ಅವ ಲಂಬಿಸಿದ್ದರಿಂದ ಕಲ್ಯಾಣಿಗಳಲ್ಲಿ ನೀರು ಬತ್ತಿ ಹೋಗಿದ್ದವು. ಜನರು ಕೂಡ ಕಲ್ಯಾಣಿಯನ್ನು ಅವಲಂಬಿಸದೇ ಪರ್ಯಾಯ ಕೊಳವೆ ಬಾವಿಗಳನ್ನು ಅವಲಂಬಿಸಿದ್ದರಿಂದ ಕಲ್ಯಾಣಿಗಳು ಬಳಕೆಗೆ ಬಾರದೆ ಅವಸಾನದಂಚಿಗೆ ತಲುಪಿದ್ದವು. ಇಂತಹ ಕಲ್ಯಾಣಿಗಳನ್ನು ಗುರುತಿಸಿ ರಾಜ್ಯದಲ್ಲಿ ಸುಮಾರು 692 ಕಲ್ಯಾಣಿಗಳನ್ನು ಪ್ರಸಕ್ತ ಸಾಲಿನಲ್ಲಿ ಜೀರ್ಣೋದ್ಧಾರ ಮಾಡಿರುವುದು ಇನ್ನೊಂದು ವಿಶೇಷ.
ಕ್ಯಾಚ್ ದಿ ರೈನ್’ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಯಂತೆ ಜಲಶಕ್ತಿ ಅಭಿಯಾನವನ್ನು ದೇಶದಾದ್ಯಂತ ಪ್ರಾರಂಭಿಸಲಾಗಿದ್ದು, ರಾಜ್ಯದಲ್ಲಿಯೂ ಜಲಶಕ್ತಿ ಅಭಿಯಾನದ ಮೂಲಕ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಜಲಮೂಲಗಳನ್ನು ಗುರುತಿಸಿ ಪುನಶ್ಚೇತನ ಗೊಳಿಸುವ ಕಾರ್ಯ ನಡೆದಿದೆ. ರಾಜ್ಯದಲ್ಲಿ ಒಟ್ಟು 5.92 ಲಕ್ಷ ಜಲಶಕ್ತಿ ಕಾಮಗಾರಿಗಳನ್ನು ಕೈಗೊಂಡಿದ್ದು, ಬಹುತೇಕ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಒಟ್ಟಾರೆ ನರೇಗಾ ಯೋಜನೆಯ ಮೂಲಕ ಸ್ವತಃ ರಾಜ್ಯ ಸರ್ಕಾರ ಹಾಗೂ ಕೂಲಿಕಾರ್ಮಿಕರು ಜಲ ಸಂರಕ್ಷಣೆಯ ವಿಶೇಷ ಕಾಯಕದಲ್ಲಿ ಗುರುತರ ಸಾಧನೆ ಮಾಡಿರುವುದು ಸ್ತುತ್ಯಾರ್ಹ.
ಕಾರ್ಮಿಕರಿಂದ ಜಲ ಕೈಂಕರ್ಯ
ನರೇಗಾ ಯೋಜನೆಯಡಿ ರಾಜ್ಯದಲ್ಲಿ ನಡೆದ ಜಲ ಕೈಂಕರ್ಯದಲ್ಲಿ ಕರ್ನಾಟಕ ಇಡೀ ದೇಶಕ್ಕೇ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ ಹಿಂದಿನ ಬೃಹತ್ ಶಕ್ತಿಯೇ ಕೂಲಿ ಕಾರ್ಮಿಕರ ಶಕ್ತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕೆಲಸ ಪಡೆದುಕೊಳ್ಳುವ ಜತೆಗೆ ಜಲಸಂರಕ್ಷಣೆ ಕಾಮಗಾರಿಯನ್ನು ಶ್ರದ್ಧೆಯಿಂದ ನಿರ್ವಹಿಸುವ ಮೂಲಕ ಗ್ರಾಮೀಣ ಕೂಲಿಕಾರ್ಮಿಕರು ಸಹ ಜಲ ರಕ್ಷಣೆಯ ಕಾಯಕದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.
ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ಜಲಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಜಲಸಂರಕ್ಷಣೆ ಕಾಮಗಾರಿಗಳ ಅನುಷ್ಠಾನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ತನ್ಮೂಲಕ ಜಲ ಸಂರಕ್ಷಣೆಯಲ್ಲಿ ನರೇಗಾ ಕೂಡ ವಿಶೇಷ ಕೊಡುಗೆ ನೀಡಿದಂತಾಗಿದೆ.
- ಬಿ.ಆನಂದ್, ಉಪಕಾರ್ಯದರ್ಶಿ, ಜಿಪಂ, ದಾವಣಗೆರೆ