ಕೊಪ್ಪಳ: ಪತ್ರ ಸಮರದ ಸಂಚಲನ ಸೃಷ್ಟಿಸಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಈಗ ಕಾಂಗ್ರೆಸ್ ಸರಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಬಿಜೆಪಿ 40 ಪರ್ಸೆಂಟ್ ಸರಕಾರವಾದರೆ, ಕಾಂಗ್ರೆಸ್ ಮೇಲೂ 15 ಪರ್ಸೆಂಟ್ ಸರಕಾರದ ಆರೋಪ ಬಂದಿದೆ. ಕರ್ನಾಟಕ ಭ್ರಷ್ಟ ರಾಜ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಕೊಪ್ಪಳದಲ್ಲಿ ಆಪ್ತರು ಹಾಗೂ ಬೆಂಬಲಿಗರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯಂತೆ ನಮ್ಮ ಸರಕಾರದ ವಿರುದ್ಧವೂ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮೊದಲಿನ ರಾಜಕಾರಣವೇ ಬೇರೆ. ಈಗಿನ ರಾಜಕಾರಣವೇ ಬೇರೆ. ಈಗಿನ ರಾಜಕಾರಣ ನನಗೆ ಒಗ್ಗುವುದಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನನ್ನನ್ನು ಸೋಲಿಸುತ್ತಾರೆ. ಹೀಗಾಗಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದೇ ಇಲ್ಲ. ಇಂದಿನ ರಾಜಕಾರಣದ ವ್ಯವಸ್ಥೆ ನನಗೆ ಸರಿ ಎನಿಸುತ್ತಿಲ್ಲ. ಈ ಹಿಂದೆ ನಾನು ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಜಕೀಯ ವ್ಯವಸ್ಥೆ ತುಂಬಾ ಹದಗೆಡುತ್ತಿದೆ. ಇದು ನನಗೆ ಬೇಸರ ತರಿಸಿದೆ ಎಂದರು.
ಚುನಾವಣೆ ಸಮಯಲ್ಲಿ ನನ್ನ ಗೆಲುವಿಗೆ ಹಲವರು ಶ್ರಮಿಸಿದ್ದಾರೆ. ಅವರಿಗಾಗಿ ನಾನು ಔತಣಕೂಟವನ್ನು ಆಯೋಜಿಸಿದ್ದೇನೆ. ಪ್ರತಿ ಬಾರಿಯೂ ನಾನು ಆಪ್ತರಿಗೆ ಔತಣಕೂಟ ಆಯೋಜಿಸಿ ಅವರಿಗೆ ಭೋಜನಕ್ಕೆ ಆಹ್ವಾನ ಮಾಡುತ್ತಿದ್ದೇನೆ. ಇದರಲ್ಲಿ ಹೊಸದೇನೂ ಇಲ್ಲ. ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ. ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ. ಸುಮ್ಮನೆ ಇದಕ್ಕೆ ಹೋಲಿಕೆಯೂ ಸರಿಯಲ್ಲ. ಇದರ ಬಗ್ಗೆ ಏನೇನೋ ಅರ್ಥ ಕಲ್ಪಿಸಿದರೆ ನಾನೇನೂ ಮಾಡಲಾಗದು ಎಂದರು.