ಲೋಕಾಯುಕ್ತ ಸಂಸ್ಥೆಯಿಂದ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಹಾಗೂ ಇತರೆ ಆರೋಪಗಳ ಕುರಿತಂತೆ ವಿಚಾರಣೆ ನಡೆಸಲು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ ಅದೇ ಆರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖಾ ವಿಚಾರಣೆ ನಡೆಯುತ್ತಿದ್ದರೆ ಅಥವಾ ಮುಕ್ತಾಯಗೊಂಡಿದ್ದರೆ ಅಂತಹ ಪ್ರಕರಣಗಳನ್ನು ಪರಿಶೀಲನೆ ನಡೆಸದೆ ಯಾಂತ್ರಿಕವಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸುತ್ತಿರುವುದು ಕಂಡು ಬಂದಿರುವುದಾಗಿ ಲೋಕಾಯುಕ್ತ ಸಂಸ್ಥೆಯು ಸ್ಪಷ್ಟಪಡಿಸಿದೆ. ಹೀಗಾಗಿ ಕೆಲವೊಂದು ಕ್ರಮ ಅನುಸರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Advertisement
ಅನುಸರಿಸಬೇಕಾದ ಕ್ರಮಗಳೇನು ?ಇಲಾಖಾ ವಿಚಾರಣೆಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸುವ ಪೂರ್ವದಲ್ಲಿ ನೌಕರರ ವಿರುದ್ಧ ಲೋಕಾಯುಕ್ತದ 12(3)ರ ತನಿಖಾ ವರದಿಯಲ್ಲಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದೆಯೇ, ಇಲ್ಲವೆ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದ್ದರೆ ಅದರ ಸಂಬಂಧ ಹೊರಡಿಸಿರುವ ಅಂತಿಮ ಆದೇಶದ ಪ್ರತಿಯನ್ನು ಲಗತ್ತಿಸಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಮಾಹಿತಿ ಒದಗಿಸಬೇಕು. ಸಕ್ಷಮ ಪ್ರಾಧಿಕಾರದ ಹಂತದಲ್ಲಿ ಇಲಾಖಾ ವಿಚಾರಣೆ ಆರಂಭಗೊಂಡು ಇತ್ಯರ್ಥವಾಗದೇ ಇದ್ದ ಸಂದರ್ಭದಲ್ಲಿ ಇಲಾಖಾ ವಿಚಾರಣೆಯ ಪ್ರಸ್ತುತ ಹಂತದ ಮಾಹಿತಿ ತಿಳಿಸಬೇಕು. ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖೆ ವಿಚಾರಣೆ ನಡೆಯುತ್ತಿದ್ದಲ್ಲಿ ಹಾಗೂ ಸರ್ಕಾರವು ಈ ವಿಚಾರಣೆ ಲೋಕಾಯುಕ್ತ ಸಂಸ್ಥೆಗೆ ವಹಿಸಬೇಕೆಂದು ನಿರ್ಧರಿಸಿದಲ್ಲಿ ಇಲಾಖಾ ವಿಚಾರಣೆ ಮುಕ್ತಾಯಗೊಳಿಸಿ ಆದೇಶಿಸುವುದು. ಆ ಬಳಿಕವಷ್ಟೇ ವಿಚಾರಣೆ ಲೋಕಾಯುಕ್ತ ಸಂಸ್ಥೆಗೆ ವಹಿಸಿ ಆದೇಶ ಹೊರಡಿಸಬೇಕು. ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರವಷ್ಟೇ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸಲು ಕ್ರಮ ವಹಿಸುವಂತೆ ೂಚಿಸಲಾಗಿದೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಲಾಖಾ ವಿಚಾರಣೆ ಪ್ರಾರಂಭಿಸಿ ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸದಿರುವುದರಿಂದ ನೌಕರರಿಗೆ ಸಿಗಬೇಕಾದ ಮುಂಬಡ್ತಿ, ಕಾಲಮಿತಿ ವೇತನ ಬಡ್ತಿ, ವೇತನ ಬಾಕಿ ಮುಂತಾದ ಸೇವಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸಲು 9 ತಿಂಗಳುಗಳ ಕಾಲಮಿತಿ ನಿಗಧಿಪಡಿಸಿರುವುದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೂ ಸಹ ಎಲ್ಲ ಇಲಾಖಾ ವಿಚಾರಣೆಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ತನಿಖಾ ವರದಿ ಸಲ್ಲಿಸಿದ ನಂತರ ಸರ್ಕಾರವು ತನಿಖಾ ವರದಿಯನ್ನು ಪರಿಶೀಲಿಸಿ ಆರೋಪದ ಗಂಭೀರತೆ ಪರಿಗಣಿಸಿ ಲಘು ದಂಡನೆ ವಿಧಿಸಬಹುದಾದ ಪ್ರಕರಣವಾಗಿದ್ದಲ್ಲಿ ಇಲಾಖಾ ವಿಚಾರಣೆ ಮಾಡಲು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ವಹಿಸುವಂತೆ ಸಕ್ಷಮ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.