ಬೆಂಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ಮುಜರಾಯಿ) ಇಲಾಖೆ ವ್ಯಾಪ್ತಿಯ ಕಡಿಮೆ ಆದಾಯವುಳ್ಳ ಸಿ ದರ್ಜೆ ದೇವಾಲಯಗಳ ಅರ್ಚಕರಿಗೆ ವಿಮಾ ಸೌಲಭ್ಯ ನೀಡಲು ಮುಂದಾಗಿರುವ ಸರಕಾರ, ಸಾಮಾನ್ಯ ಸಂಗ್ರಹ ನಿಧಿಯ ಮೊತ್ತವನ್ನು ಹೆಚ್ಚಳ ಮಾಡಲಿದೆ.
ಇದಕ್ಕಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯ ದತ್ತಿಗಳ (ತಿದ್ದುಪಡಿ) ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ.
ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಸಿ ದರ್ಜೆಯ 34 ಸಾವಿರ ದೇವಸ್ಥಾನಗಳಿವೆ. 5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಇದ್ದರೆ ಸಾಮಾನ್ಯ ಸಂಗ್ರಹಣ ನಿಧಿಗೆ ಹಣ ಕೊಡಬೇಕಿರಲಿಲ್ಲ. 5-25 ಲಕ್ಷ ರೂ. ಆದಾಯ ಇದ್ದರೆ ಶೇ.5 ಮತ್ತು 25 ಲಕ್ಷ ರೂ. ಮೇಲ್ಪಟ್ಟ ಆದಾಯವಿದ್ದರೆ ಶೇ.10 ರಷ್ಟು ಸಾಮಾನ್ಯ ಸಂಗ್ರಹಣಾ ನಿಧಿಗೆ ಜಮೆ ಮಾಡಬೇಕಿತ್ತು. ಇದನ್ನು ಮಾರ್ಪಡಿಸಲಾಗಿದೆ ಎಂದರು.
ವ್ಯವಸ್ಥಾಪನ ಸಮಿತಿಯಲ್ಲಿ ವಿಶ್ವಕರ್ಮರಿಗೆ ಅವಕಾಶ ದೇವಸ್ಥಾನಗಳ ಆದಾಯ ಹಾಗೂ ನಿರ್ವಹಣೆಗಾಗಿ ರಚಿಸುವ ವ್ಯವಸ್ಥಾಪನ ಸಮಿತಿಗಳಿಗೆ ವಿಶ್ವಕರ್ಮ ಸಮುದಾಯದ ಹಿಂದೂ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲವುಳ್ಳ ಓರ್ವ ಪ್ರತಿನಿಧಿಯನ್ನು ರಾಜ್ಯ ಧಾರ್ಮಿಕ ಪರಿಷತ್ತು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಅಂತಹ ವ್ಯಕ್ತಿಗಳು ಸಿಗದಿದ್ದರೆ, ಆ ಸ್ಥಾನವನ್ನು “ಸಾಮಾನ್ಯ ವರ್ಗ’ದ ವ್ಯಕ್ತಿಗೆ ನೀಡಬಹುದು.
ದೈವನರ್ತಕರಿಗೂ ವಿಸ್ತರಿಸಿ: ಖಾದರ್
ದೇವಸ್ಥಾನ ಹಾಗೂ ಅರ್ಚಕರಿಗೆ ನೀಡುವ ಸೌಲಭ್ಯಗಳನ್ನು ಕರಾವಳಿ ಭಾಗದ ದೈವಸ್ಥಾನಗಳು, ಪಾತ್ರಿಗಳು ಹಾಗೂ ದೈವನರ್ತಕರಿಗೂ ವಿಸ್ತರಿಸಿ. ಅವರಿಗೆ ಯಾವುದೇ ಸೌಲಭ್ಯಗಳೂ ಇರುವುದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಕಾರ್ಯಪಡೆ ರಚಿಸುತ್ತೇವೆ: ರೆಡ್ಡಿ
ಸಾಮಾನ್ಯ ಸಂಗ್ರಹಣ ನಿಧಿಯ ಹಣವನ್ನು ಸಿ ದರ್ಜೆಯ ದೇವಸ್ಥಾನ ಗಳಿಗೆ ಮಾತ್ರ ಬಳಸುವ ನಿಯಮ ತಂದಿದ್ದೇವೆ. ಮುಜರಾಯಿ ದೇವಸ್ಥಾನಗಳ ಆಸ್ತಿ ಸಂರಕ್ಷಣೆಗಾಗಿ ಸರ್ವೇ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯಪಡೆ ಕೂಡ ರಚಿಸುತ್ತೇವೆ. ದೈವಸ್ಥಾನ, ಪಾತ್ರಿಗಳಿಗೂ ಸೌಲಭ್ಯ ಸಿಗುವಂತೆ ನಿಯಮ ರಚಿಸುತ್ತೇವೆ ಎಂದು ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.