ಬೆಂಗಳೂರು: ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಕೂಟದ ಕ್ವಾರ್ಟರ್‌ಫೈನಲ್ ಹಂತದ ಪಂದ್ಯಗಳು ಬುಧವಾರದಿಂದ ಆರಂಭವಾಗಲಿದೆ.
ಕರ್ನಾಟಕವು ಹೈದರಾಬಾದ್ ತಂಡವನ್ನು ಎದುರಿಸಲಿದೆ. ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಗೆದ್ದು ಸೆಮಿಫೈನಲ್‌ಗೆ ಏರುವ ಕನಸನ್ನು ರಾಜ್ಯ ತಂಡ ಕಾಣುತ್ತಿದೆ.
ವಿನಯ್ ಅನುಪಸ್ಥಿತಿ: ವಿನಯ್ ಕುಮಾರ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಆಡಿರಲಿಲ್ಲ. ಗಾಯದ ಕಾರಣದಿಂದ ತಂಡದಿಂದ ಹೊರ ಬಿದ್ದಿದ್ದರು. ವಿನಯ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಅವರು ಲಭ್ಯವಿರುವುದಿಲ್ಲ. ಅವರ ಬದಲಿಗೆ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ವೇಗಿ ಅಭಿಮನ್ಯು ಮಿಥುನ್ ಕೂಡ ತಂಡಕ್ಕೆ ಅಲಭ್ಯರಾಗಿದ್ದಾರೆ.
ರಾಜ್ಯಕ್ಕೆ ವಾಪಸ್ ಬಲ: ಇಬ್ಬರು ಹೊರಬಿದ್ದರೆ ಮೂವರು ತಂಡದ ಒಳಕ್ಕೆ ಬಂದಿದ್ದಾರೆ. ಇದು ಕರ್ನಾಟಕಕ್ಕೆ ಅಲ್ಪ ಸಮಾಧಾನ ತಂದಿದೆ. ಹೌದು, ಹಿಂದಿನ ಪಂದ್ಯಗಳಿಲ್ಲದ ಎಸ್.ಅರವಿಂದ್ ಮತ್ತು ಸ್ಟುವರ್ಟ್ ಬಿನ್ನಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲ ಗಾಯದಿಂದ ಬಳಲುತ್ತಿದ್ದ ಸಿ.ಎಂ.ಗೌತಮ್ ಕೂಡ ಫಿಟ್ ಆಗಿ ವಾಪಸ್ ಆಗಿದ್ದಾರೆ.
ಕರ್ನಾಟಕ ತಂಡ: ಕರುಣ್ ನಾಯರ್ (ನಾಯಕ), ಮಾಯಾಂಕ್ ಅಗರ್ವಾಲ್, ಆರ್.ಸಮರ್ಥ್, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್, ಪವನ್ ದೇಶಪಾಂಡೆ, ಕೆ.ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ, ಎಸ್.ಅರವಿಂದ್, ರೋನಿತ್ ಮೋರೆ, ಟಿ.ಪ್ರದೀಪ್, ದೇವದತ್ ಪಡೀಕಲ್, ಬಿ.ಆರ್.ಶರತ್.