Advertisement

ಶ್ಮಶಾನ ಜಾಗದ ಬಗ್ಗೆ ತಪ್ಪು ಮಾಹಿತಿ: ಜಿಲ್ಲಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಆದೇಶ

11:28 PM Mar 09, 2023 | Team Udayavani |

ಬೆಂಗಳೂರು : ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಶ್ಮಶಾನ ಜಾಗ ಒದಗಿಸಿರುವ ಬಗ್ಗೆ ತಪ್ಪು ಮಾಹಿತಿ ನೀಡಿರುವ ಎಲ್ಲ ಜಿಲ್ಲಾಧಿಕಾರಿಗಳು ಮಾ. 16ರಂದು ಕೋರ್ಟ್‌ ಮುಂದೆ ಬಂದು ನಿಲ್ಲಬೇಕು ಎಂದು ಹೈಕೋರ್ಟ್‌ ಖಡಕ್‌ ಆದೇಶ ನೀಡಿದೆ.

Advertisement

ಅಲ್ಲದೆ ನ್ಯಾಯಾಲಯದ ಆದೇಶವನ್ನು ಹಗುರವಾಗಿ ಪರಿಗಣಿಸಿ ತಪ್ಪು ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳನ್ನು ಜೈಲಿಗೆ ಕಳುಹಿಸಿದರೆ ಬುದ್ಧಿ ಬರುತ್ತದೆ ಎಂದೂ ಹೈಕೋರ್ಟ್‌ ಎಚ್ಚರಿಕೆ ಕೊಟ್ಟಿದೆ.

ರಾಜ್ಯದಲ್ಲಿ ಶ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್‌ ಹೊರಡಿಸಿದ ಆದೇಶ ಜಾರಿಯಾಗಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಅರ್ಜಿಯ ವಿಚಾರಣೆ ವೇಳೆ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ವಾದ ಮಂಡಿಸಿ ಶ್ಮಶಾನ ಜಾಗ ಒದಗಿಸಿರುವ ಬಗ್ಗೆ ರಾಜ್ಯ ಸರಕಾರ ಕೊಟ್ಟಿರುವ ಅಂಕಿ-ಅಂಶಗಳಿಗೂ ಮತ್ತು ಕಾನೂನು ಸೇವಾ ಪ್ರಾಧಿಕಾರ ಸಂಗ್ರಹಿಸಿರುವ ಮಾಹಿ ತಿಗೂ ವ್ಯತ್ಯಾಸವಿದೆ. ರಾಜ್ಯದಲ್ಲಿ ಇನ್ನೂ 319 ಗ್ರಾಮಗಳಿಗಷ್ಟೇ ಶ್ಮಶಾನ ಜಾಗ ಒದಗಿಸಬೇಕು ಎಂದು ಸರಕಾರ ಹೇಳಿದೆ. ಆದರೆ, ವಾಸ್ತವದಲ್ಲಿ ಇನ್ನೂ ರಾಜ್ಯದಲ್ಲಿ 2,041 ಗ್ರಾಮಗಳಿಗೆ ಶ್ಮಶಾನ ಜಾಗ ಒದಗಿಸಬೇಕಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದೇ ವೇಳೆ ಸರಕಾರದ ಪರ ವಕೀಲರು, ಈ ಪ್ರಕರಣದಲ್ಲಿ ಸರಕಾರದಿಂದ ತಪ್ಪಾಗಿದೆ. ಕೆಲವು ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆಂದು ಸಮಜಾಯಿಷಿ ನೀಡಿದರು.

Advertisement

ಇದರಿಂದ ಕೋಪ ಗೊಂಡ ನ್ಯಾಯಪೀಠ, ರಾಜ್ಯದಲ್ಲಿ ಶ್ಮಶಾನಕ್ಕೆ ಭೂಮಿ ಹೊಂದಿರದ ಗ್ರಾಮ ಗಳಿಗೆ ಆರು ತಿಂಗಳ ಒಳಗೆ ಅಗತ್ಯ ಜಾಗ ಒದಗಿಸಬೇಕು. ರಾಜ್ಯದ ಎಲ್ಲ ಗ್ರಾಮಗಳಲ್ಲೂ ಶ್ಮಶಾನಕ್ಕೆ ಜಾಗ ಇರುವುದನ್ನು ಸರಕಾರ ಖಾತರಿ ಪಡಿಸಬೇಕು. ಒಟ್ಟು 1,077 ಎಕರೆ ಶ್ಮಶಾನ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕೆಂದು 2019ರ ಆ. 20ರಂದು ಹೈಕೋರ್ಟ್‌ ಆದೇಶಿಸಿತ್ತು. ದುರದೃಷ್ಟಕರ ಸಂಗತಿ ಎಂದರೆ ಹೈಕೋರ್ಟ್‌ ಆದೇಶ ನೀಡಿ ಮೂರೂವರೆ ವರ್ಷ ಕಳೆದಿದ್ದರೂ, ಶ್ಮಶಾನಕ್ಕೆ ಜಾಗ ಒದಗಿಸಲು ಈಗಲೂ ಸರಕಾರ ಒದ್ದಾಡುತ್ತಿದೆ. ಶ್ಮಶಾನ ಜಾಗ ಒದಗಿಸಲು ಆಗಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ ಬಿಡಿ, ಅಧಿಕಾರಿಗಳ ಭಂಡ ಧೈರ್ಯವನ್ನಾದರೂ ಕೋರ್ಟ್‌ ಮೆಚ್ಚಲಿದೆ ಎಂದು ಕಟುವಾಗಿ ಹೇಳಿತು.

ಅಲ್ಲದೆ, ಇನ್ನೂ 2,041 ಗ್ರಾಮಗಳಲ್ಲಿ ಶ್ಮಶಾನ ಜಾಗ ಒದಗಿಸಿಲ್ಲ. ಆ ಮೂಲಕ ಜನರಿಗೆ ಸಂವಿಧಾನದತ್ತವಾದ ದೊರೆಯಬೇಕಿರುವ ಸೌಲಭ್ಯ ಒದಗಿಸಲು ಸರಕಾರಕ್ಕೆ ಯಾವುದೇ ಉದ್ದೇಶವಿಲ್ಲ. ಹೈಕೋರ್ಟ್‌ ಆದೇಶಕ್ಕೆ ಅಧಿಕಾರಿಗಳು ಅಗೌರವ ತೋರುತ್ತಿದ್ದಾರೆ. ಇದರಿಂದ ಪ್ರಕರಣದ ಆರೋಪಿಗಳಾದ ಸರಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸುವುದು ಬಿಟ್ಟು ಅನ್ಯ ಮಾರ್ಗವಿಲ್ಲ. ಆದ್ದರಿಂದ ಪ್ರಕರಣದ ಆರೋಪಿಗಳು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಎಲ್ಲ ಜಿಲ್ಲಾಧಿಕಾರಿಗಳು ಮಾ. 16ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next