Advertisement

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

08:30 PM Dec 01, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮಗಳನ್ನು ಜರಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್‌, ರಾಜ್ಯದ ಯಾವ ಜಿಲ್ಲೆಯಲ್ಲೂ ಅಕ್ರಮವಾಗಿ ಪ್ರಾಣಿಗಳ ವಧೆ ಅಥವಾ ಬಲಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.

Advertisement

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳನ್ನು ನಡೆಸುತ್ತಿರುವ ಅಬ್ದುಲ್‌ ಹಕ್‌ ಎಂಬವರು ಬೆಂಗಳೂರು, ರಾಮನಗರ ಸಹಿತ ಹಲವು ಜಿಲ್ಲೆಗಳಿಗೆ ಅಕ್ರಮವಾಗಿ ದನದ ಮಾಂಸ ರಫ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೊಸದಿಲ್ಲಿ ಮೂಲದ “ಗೋ ಗ್ಯಾನ್‌ ಫೌಂಡೇಷನ್‌’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಸರಕಾರ ಹಾಗೂ ಚನ್ನರಾಯಟ್ಟಣ ಪುರಸಭೆ ಪರ ವಕೀಲರು ವಾದ ಮಂಡಿಸಿ, ಅರ್ಜಿಯಲ್ಲಿ ಆರೋಪಿಸಲಾಗಿರುವ ವ್ಯಕ್ತಿ ನಡೆಸುತ್ತಿದ್ದ ಕಸಾಯಿಖಾನೆಗಳನ್ನು ಬಂದ್‌ ಮಾಡಲಾಗಿದೆ. ಆತನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಈಗ ಚನ್ನರಾಯಪಟ್ಟಣದಲ್ಲಿ ಯಾವುದೇ ಅಕ್ರಮ ಕಸಾಯಿಖಾನೆ ಅಥವಾ ಗೋಮಾಂಸ ಸಾಗಾಟ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಪ್ರಕರಣಗಳು ಕಂಡು ಬಂದರೆ, ಕಾನೂನು ರೀತಿ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚನ್ನರಾಯಪಟ್ಟಣಕ್ಕೆ ಸೀಮಿತವಾಗಿ ಸರಕಾರ ಮತ್ತು ಪುರಸಭೆ ಸ್ಪಷ್ಟನೆ ನೀಡಿದೆ, ಅದಕ್ಕೆ ನ್ಯಾಯಾಲಯದ ಸಮಹಮತವಿದೆ. ಆದರೆ, ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ ಜರಗಿಸಬೇಕು. ರಾಜ್ಯದ ಯಾವ ಜಿಲ್ಲೆಯಲ್ಲೂ ಅಕ್ರಮವಾಗಿ ಪ್ರಾಣಿಗಳ ವಧೆ ಅಥವಾ ಬಲಿ ನಡೆಯದಂತೆ ಸರಕಾರ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಒಂದೊಮ್ಮೆ ನಿರ್ಲಕ್ಷ್ಯ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರು ಆಗುತ್ತಾರೆ ಎಂದು ತಾಕೀತು ಮಾಡಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.

ಇದನ್ನೂ ಓದಿ : ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

Advertisement
Advertisement

Udayavani is now on Telegram. Click here to join our channel and stay updated with the latest news.

Next