ಬೆಂಗಳೂರು: ಕೋವಿಡ್-19 ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಸೇನಾ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಹಾಸಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಖಾತರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಬಿಬಿಎಂಪಿ ವರದಿ ಸಲ್ಲಿಸಿ, ಹೈಕೋರ್ಟ್ ಸೂಚನೆ ನಂತರ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಸೀಮಿತವಾಗಿ ಹೆಚ್ಚಳ ಮಾಡಲಾಗಿದೆ. ಎಚ್‌ಡಿಯು ಹಾಸಿಗೆಗಳ ಸಂಖ್ಯೆ3,490ಕ್ಕೆ ಏರಿಕೆ ಮಾಡಲಾಗಿದೆ. ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆ 418ಕ್ಕೆ ಮತ್ತು ಐಸಿಯು ಸಂಖ್ಯೆ 497ಕ್ಕೆ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿತು.
ಇದನ್ನೂ ಓದಿ :ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಲು ಕಾಂಗ್ರೆಸ್ ಸದಾ ಸಿದ್ಧ: ಡಿಕೆಶಿ
ಅದನ್ನು ಪರಿಗಣಿಸಿದ ನ್ಯಾಯಪೀಠ, ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದಕ್ಕೆ ಅನುಗುಣವಾಗಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕಿದೆ. ಆದರೆ, ಸೇನಾ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳನ್ನು ಕಲ್ಪಿಸುವಂತೆ ಕೋರಿ ಬಿಬಿಎಂಪಿ ಸಲ್ಲಿಸಿರುವ ಮನವಿ ಪತ್ರವನ್ನು ನಗರದ ಮಿಲಿಟರಿ ಹಾಗೂ ವಾಯು ಸೇನೆಯು ತಿರಸ್ಕರಿಸಿದೆ. ಬೆಂಗಳೂರಿನಲ್ಲಿ ಆತಂಕಕಾರಿ ಪರಿಸ್ಥಿತಿ ಇದೆ. ಇದು ಜೀವಿಸುವ ಹಕ್ಕಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಕೇಂದ್ರ ಸರ್ಕಾರದ ಪರ ವಕೀಲರು ಬಿಬಿಎಂಪಿಯ ಮನವಿಯನ್ನು ಸಂಬಂಧಪಟ್ಟ ಪ್ರಧಿಕಾರಿಗಳ ಮುಂದಿಟ್ಟು ಸೇನಾ (ಕಮಾಂಡ್) ಆಸ್ಪತ್ರೆಯಲ್ಲಿ ಕೆಲ ಹಾಸಿಗೆಗಳನ್ನು ಸಾರ್ವನಿಕರಿಗೆ ಕಲ್ಪಿಸುವ ಬಗ್ಗೆ ಖಾತರಿಪಡಿಸಬೇಕು. ರಾಜ್ಯ ಸರ್ಕಾರ ಸಹ ಸೇನಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ಹಾಸಿಗೆ ಲಭ್ಯವಾಗುವ ವಿಚಾರವಾಗಿ ಸಹಕಾರ ಕೋರಬಹುದ ಎಂದು ನಿರ್ದೇಶಿಸಿತು.
ಇನ್ನೂ ಐದು ಸಾವಿರಕ್ಕೂ ಹೆಚ್ಚು ಸಕ್ರಿಯೆ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಹಾಸಿಗೆ, ರೆಮ್‌ಡಿಸಿವರ್ ಹಾಗೂ ಆಕ್ಸಿಜನ್ ಲಭ್ಯತೆ ಬಗ್ಗೆ ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಹಾಸಿಗೆ ಲಭ್ಯತೆ ಕುರಿತು ಮಾಧ್ಯಮಗಳ ಮೂಲಕ ಸಹಾಯವಾಣಿಗಳ ಪ್ರಚಾರ ಮಾಡಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿಗಳ ವಿಚಾರಣೆಯನ್ನು ಏ.29ಕ್ಕೆ ಮುಂದೂಡಿತು.