ಬೆಂಗಳೂರು: ಬೆಳ್ಳಂದೂರು ಕೆರೆ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಬಗ್ಗೆ ಇರುವಷ್ಟು ಕಾಳಜಿ ಕೆರೆಗಳ ಬಗ್ಗೆ ಇಲ್ಲವೇ? ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ.
ಕಳೆದ ಮೂರು ವರ್ಷಗಳಿಂದ, ಇಷ್ಟೊಂದು ದೊಡ್ಡ ಕರ್ನಾಟಕ ಸರಕಾರಕ್ಕೆ ಕೆರೆ ಸ್ವಚ್ಛತೆಯ ಸಣ್ಣ ಕೆಲಸ ಮಾಡಲು ಸಾಧ್ಯವಾಗಿಲ್ಲವೇ? ಕೆರೆ ಸ್ವಚ್ಚತೆ, ಕೆರೆ ತ್ಯಾಜ್ಯಗಳ ನಿರ್ವಹಣೆ ಬಗ್ಗೆ ಪತ್ರಿಕೆಗಳಲ್ಲಿ ತಜ್ಞರ ಸಲಹೆಗೆ ಯಾವತ್ತಾದರೂ ಜಾಹೀರಾತು ಕೊಟ್ಟಿದ್ದೀರಾ ಎಂದು ಬೆಳ್ಳಂದೂರು ಕೆರೆಗೆ ಸಂಬಂಧಪಟ್ಟಂತೆ ಆಯುಕ್ತರನ್ನು ಪೀಠ ತರಾಟೆಗೆ ತೆಗೆದುಕೊಂಡಿದೆ.
ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕ್ರಿಯಾಯೋಜನೆ ರೂಪಿಸಿ, ಬಿಡಿಎ ಆಯುಕ್ತ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಇದಕ್ಕೆ ಸಂಬಂಧಿಸಿದ ಎಲ್ಲಾ ಹಿರಿಯ ಅಧಿಕಾರಿಗಳು ಹಾಜರಾಗಿ ಕೆರೆ ಶುದ್ಧೀಕರಣಕ್ಕೆ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ವಿವರಣೆ ನೀಡಬೇಕೆಂದು ಸೂಚಿಸಿದೆ.
ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ, ಸಂಸದರಾದ ರಾಜೀವ್ ಚಂದ್ರಶೇಖರ್ ಮತ್ತು ಕುಪೇಂದ್ರ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.