Advertisement

ಕೊತ್ತೂರು ಮಂಜುನಾಥ್‌ ಶಾಸಕತ್ವ ಕಾನೂನುಬಾಹಿರ

07:00 AM Apr 26, 2018 | |

ಬೆಂಗಳೂರು: ರಾಜ್ಯ ವಿಧಾನಸಭೆಗೆ 2013ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಜಿ.ಮಂಜುನಾಥ್‌ (ಕೊತ್ತೂರು ಮಂಜುನಾಥ್‌) ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿರುವುದು ಸಾಬೀತಾಗಿದ್ದು, ಅವರ ಶಾಸಕ ಸ್ಥಾನ ಕಾನೂನು ಬಾಹಿರ ಎಂದು ಹೈಕೋರ್ಟ್‌ ಘೋಷಿಸಿದೆ.

Advertisement

ಜಿ.ಮಂಜುನಾಥ್‌ ತಾವು ಬುಡಗ ಜಂಗಮ ಜಾತಿಗೆ ಸೇರಿದವರು ಎಂದು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಅದನ್ನು ಸಾಬೀತುಪಡಿಸುವಲ್ಲಿ ಅವರು ವಿಫ‌ಲವಾಗಿರುವುದರಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರು ಶಾಸಕ ಸ್ಥಾನಕ್ಕೆ ಆಯ್ಕೆಯಾಗಿರುವುದು ಕಾನೂನು ಬಾಹಿರ ಎಂದು ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಬುಧವಾರ ತೀರ್ಪು ನೀಡಿದೆ.

ಮಂಜುನಾಥ್‌ ಹಿಂದುಳಿದ ವರ್ಗ-1ಕ್ಕೆ ಸೇರುವ “ಬೈರಾಗಿ’ ಸಮುದಾಯಕ್ಕೆ ಸೇರಿದವರು. ಬುಡಗ ಜಂಗಮನೆಂದು ಸುಳ್ಳುಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಕ್ಕಾಗಿ ಪ್ರಜಾಪ್ರತಿನಿಧಿ ಕಾಯ್ದೆ ನಿಯಮ 125-ಎ ಅನ್ವಯ ಶಾಸಕ ಮಂಜುನಾಥ್‌ಗೆ 25 ಸಾವಿರ ರೂ. ದಂಡ ವಿಧಿಸಿದೆ. 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಎನ್‌.ಮುನಿಅಂಜಿನಪ್ಪ ಹೈಕೊರ್ಟ್‌ ಮೊರೆಹೋಗಿದ್ದರು.

ತೀರ್ಪಿನ ಪರಿಣಾಮವೇನು?
ತೀರ್ಪು ಪ್ರಶ್ನಿಸಿ ಮಂಜುನಾಥ್‌ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಮೇಲ್ಮನವಿಯಲ್ಲೂ ಇದೇ ತೀರ್ಪು ಹೊರಬಿದ್ದರೂ ಆಗ ಶಾಸಕತ್ವದ ಅವಧಿ ಮುಗಿಯಲಿರುವುದರಿಂದ ಸಮಸ್ಯೆ ಆಗುವುದಿಲ್ಲ. ಆದರೆ, ಶಾಸಕರಿಗೆ ನೀಡುವ ಪಿಂಚಣಿಗೆ ಅವರು ಅರ್ಹರಾಗಿರುವುದಿಲ್ಲ.

ಕೋಲಾರದಲ್ಲಿ ಪಕ್ಷೇತರ ಅಭ್ಯರ್ಥಿಯಾಗ್ತಾರಾ?
ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್‌ ಅವರ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ಹೈಕೋರ್ಟ್‌ ಘೋಷಣೆ ಮಾಡಿರುವುದರಿಂದ ಅವರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆಯಿದ್ದು, ಅವರು ಕೋಲಾರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

Advertisement

ಜಾತಿ ಪ್ರಮಾಣ ಪತ್ರ ವಿವಾದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕೊತ್ತೂರು ಮಂಜುನಾಥ್‌ ಸಾಮಾನ್ಯ ಕ್ಷೇತ್ರವಾದ ಕೋಲಾರ ಕ್ಷೇತ್ರದಿಂದಲೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಮುಳಬಾಗಿಲಿನಲ್ಲಿ ತಿರಸ್ಕೃತವಾದರೆ ಕೋಲಾರದಿಂದ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಕೋಲಾರದಿಂದ ಸದ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸೈಯದ್‌ ಜಮೀರ್‌ ಪಾಶಾ ಅವರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ಅವರನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಸಿ ಕೊತ್ತನೂರು ಮಂಜುನಾಥ್‌ ಅವರನ್ನು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಅತ್ತ ಮುಳಬಾಗಿಲು ಕ್ಷೇತ್ರದಿಂದ ಕೊನೇ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೇಂದ್ರದ ಮಾಜಿ ಸಚಿವ
ಕೆ.ಎಚ್‌.ಮುನಿಯಪ್ಪ ಪುತ್ರಿ ನಂದಿನಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next