Advertisement

ಮೇಲ್ಮನೆ ಸದಸ್ಯರಿಗೆ ಸಚಿವ ಸ್ಥಾನ:  ಸೋಮವಾರ ಹೈಕೋರ್ಟ್‌ ತೀರ್ಪು

10:40 PM Nov 27, 2020 | sudhir |

ಬೆಂಗಳೂರು: ವಿಧಾನಪರಿಷತ್‌ ಸದಸ್ಯರಾದ ಎಚ್‌. ವಿಶ್ವನಾಥ್‌, ಎಂ.ಟಿ.ಬಿ.ನಾಗರಾಜ್‌ ಹಾಗೂ ಹಾಗೂ ಆರ್‌. ಶಂಕರ್‌ಗೆ ಸಚಿವ ಸ್ಥಾನ ನೀಡದಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ಸೋಮವಾರ (ನ.30) ತೀರ್ಪು ಪ್ರಕಟಿಸಲಿದೆ.

Advertisement

ಮೂವರು ವಿಧಾನಪರಿಷತ್‌ ಸದಸ್ಯರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೋರಿ ವಕೀಲ ಎ.ಎಸ್‌. ಹರೀಶ್‌ ಕುಮಾರ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಮುಗಿದ ಬಳಿಕ ಮಧ್ಯಾಹ್ನ ನ್ಯಾಯಪೀಠ ಮಧ್ಯಾಂತರ ಅದೇಶದ ಉಕ್ತಲೇಖನ (ಡಿಕ್ಟೇಷನ್‌) ಆರಂಭಿಸಿತು. ಆದರೆ, ಸಮಯದ ಕೊರತೆ ಕಾರಣ ಸೋಮವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಉಕ್ತಲೇಖನ ಮುಂದುವರಿಸುವುದಾಗಿ ನ್ಯಾಯಪೀಠ ಹೇಳಿತು.

ಇದಕ್ಕೂ ಮೊದಲು ಅರ್ಜಿದಾರರ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌, ಅರ್ಜಿಯಲ್ಲಿ ಪ್ರತಿಪಾದಿಗಳ ಪಟ್ಟಿಯಿಂದ ರಾಜ್ಯಪಾಲರನ್ನು ಮತ್ತು ಅರ್ಜಿಯಲ್ಲಿನ ಕೆಲವು ಆಕ್ಷೇಪಾರ್ಹ ಪದಗಳನ್ನು ತೆಗೆದುಹಾಕುವ ಕುರಿತು ಮೆಮೋ ಸಲ್ಲಿಸಿದ್ದರು. ನ್ಯಾಯಾಲಯ ಅದನ್ನು ಮಾನ್ಯ ಮಾಡಿತು.

ಇದನ್ನೂ ಓದಿ:ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

Advertisement

ನಂತರ ವಾದ ಮುಂದುವರಿಸಿದ ಪ್ರಶಾಂತ್‌ ಭೂಷಣ್‌, ಎಚ್‌. ವಿಶ್ವನಾಥ್‌, ಎಂ.ಟಿ.ಬಿ ನಾಗರಾಜ್‌, ಆರ್‌. ಶಂಕರ್‌ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಸುಪ್ರೀಂಕೋರ್ಟ್‌ ಆದೇಶದಂತೆ ಮೂವರು ಜನರಿಂದ ಆಯ್ಕೆಗೊಂಡಿಲ್ಲ ಬದಲಿಗೆ ಚುನಾಯಿತ ಶಾಸಕರಿಂದ ಮತ್ತು ನಾಮನಿರ್ದೇಶನದ ಮೂಲಕ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಹಾಗಾಗಿ, ಅವರನ್ನು ಸಚಿವರನ್ನಾಗಿ ನೇಮಿಸಬಾರದು ಎಂದು ತಿಳಿಸಿದರು.

ಪ್ರತಿವಾದಿ ವಿಧಾನಪರಿಷತ್‌ ಸದಸ್ಯರ ಪರ ವಾದ ಮಂಡಿಸಿದ ನ್ಯಾಯವಾದಿಗಳಾದ ಉದಯ್‌ ಹೊಳ್ಳ ಮತ್ತು ಅಶೋಕ್‌ ಹಾರನಹಳ್ಳಿ, ಸುಪ್ರೀಂಕೋರ್ಟ್‌ ಎಲ್ಲೂ ಅವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಹೇಳಿಲ್ಲ, ಅರ್ಜಿದಾರರು ಸುಪ್ರೀಂಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ವಿಧಾನಪರಿಷತ್ತಿನ ಸದಸ್ಯರಾಗಿ ಅವರು ಆಯ್ಕೆಯಾಗಿರುವ ಕಾರಣ ಸಹಜವಾಗಿಯೇ ಅವರಿಗೆ ಸಚಿವರಾಗುವ ಅರ್ಹತೆ ಇದೆ ಎಂದರು.

ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಲಿಂಗ ನಾವದಗಿ, ಎಂ.ಟಿ.ಬಿ.ನಾಗರಾಜ್‌, ಆರ್‌. ಶಂಕರ್‌ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಎಚ್‌. ವಿಶ್ವನಾಥ್‌ ಅವರನ್ನು ರಾಜ್ಯಪಾಲರು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಿದ್ದಾರೆ. ನಾಮ ನಿರ್ದೇಶನ ಮಾಡುವ ಅಧಿಕಾರ ರಾಜ್ಯಪಾಲರಿಗಿದೆ. ಆದ್ದರಿಂದ ಮೂವರನ್ನು ಸಚಿವರನ್ನಾಗಿ ನೇಮಕ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next