Advertisement

ಹಿಂಬದಿ ಪ್ರಯಾಣ ನಿಷೇಧ ಆದೇಶಕ್ಕೆ ತಡೆ

07:51 AM Nov 04, 2017 | Team Udayavani |

ಬೆಂಗಳೂರು: 100ಸಿಸಿಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ಬೈಕ್‌ಗಳ ನೋಂದಣಿ ಹಾಗೂ ಹಿಂಬದಿ ಸವಾರರ ಪ್ರಯಾಣ ರದ್ದುಗೊಳಿಸಿದ್ದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ರಾಜ್ಯ ಸರಕಾರ ಅ. 10ರಂದು ಹೊರಡಿಸಿದ್ದ ಆದೇಶ ರದ್ದುಕೋರಿ ಚೆನ್ನೈಯ ಟಿವಿಎಸ್‌ ಮೋಟಾರ್‌ ಕಂಪೆನಿ ಲಿ. ಹಾಗೂ ಇಂದಿರಾನಗರದ ಹೀರೋ ಮೋಟಾರ್‌ ಕಾರ್ಪ್‌ ಕಂಪೆನಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ಏಕಸದಸ್ಯ
ಪೀಠ ಈ ಆದೇಶ ನೀಡಿತು.

Advertisement

ಹೈಕೋರ್ಟ್‌ನ ಈ ಆದೇಶದಿಂದ 100 ಸಿಸಿಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ಬೈಕ್‌ ತಯಾರಿಕ ಕಂಪೆನಿಗಳು ನಿಟ್ಟುಸಿರು ಬಿಡುವಂತಾಗಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕೇಂದ್ರ ಮೋಟಾರು ವಾಹನಗಳ ಕಾಯಿದೆಗೆ ಹೊಸ ನಿಯಮ ರೂಪಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ. ಜತೆಗೆ ಈಗಾಗಲೇ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೆ ಸುರಕ್ಷತೆ ಕ್ರಮಗಳ ಬಗ್ಗೆ ಕೇಂದ್ರದ ಕಾಯಿದೆಯ ನಿಯಮಗಳಲ್ಲಿದೆ. ಹೀಗಿದ್ದರೂ ರಾಜ್ಯ ಸರಕಾರ, ಸಂವಿಧಾನ ಬಾಹಿರ, ಅವೈಜ್ಞಾನಿಕವಾಗಿ 100ಸಿಸಿಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ಬೈಕ್‌ಗಳ ನೋಂದಣಿ ಹಾಗೂ ಹಿಂಬದಿ ಸವಾರರ ಪ್ರಯಾಣ ರದ್ದು ಗೊಳಿಸಿರುವ ಕ್ರಮ ಸರಿಯಲ್ಲ. ಹೀಗಿ ಸಾರಿಗೆ ಇಲಾಖೆ ಮೋಟಾರು ವಾಹನಗಳ ಕಾಯಿದೆ ಕಲಂ 143 (3)ರ ಅನ್ವಯ ಆದೇಶ ರದ್ದುಗೊಳಿಸುವಂತೆ ಕೋರಿದರು. ಕೇಂದ್ರ ಮೋಟಾರು ವಾಹನಗಳ ಕಾಯಿದೆಗೆ ರಾಜ್ಯ ಸರಕಾರ ತಿದ್ದುಪಡಿ ತರುವ ತನಕ ಅ. 13ರಂದು ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿತು.

ರಾಜ್ಯದಲ್ಲಿ ಕಳೆದ 17 ವರ್ಷಗಳಲ್ಲಿ 100 ಸಿಸಿಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯವುಳ್ಳ ದ್ವಿಚಕ್ರವಾಹನಗಳು 1ಕೋಟಿಗೂ
ಅಧಿಕ ಮಾರಾಟವಾಗಿದ್ದು ಗ್ರಾಹಕರಿಗೆ ಅನುಕೂಲಕರವಾಗಿವೆ. ಈ ವಾಹನಗಳ ಎಂಜಿನ್‌ಗಳು 97.98.ಸಿಸಿ ಹೊಂದಿದ್ದು ಉತ್ತಮ ದಕ್ಷತೆ ಹಾಗೂ ಮೈಲೇಜ್‌ ನೀಡುತ್ತಿವೆ. ಆದರೆ, ರಾಜ್ಯಸರಕಾರ ಅವೈಜ್ಞಾನಿಕವಾಗಿ ಈ ಮಾದರಿಯ ಬೈಕ್‌ಗಳ ನೋಂದಣಿ ಹಾಗೂ ಹಿಂಬದಿ ಸವಾರರ ಪ್ರಯಾಣ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದೇಶ ಹೊರಡಿಸುವ ಮುನ್ನ ಈ ಪ್ರಕಾರದ ಬೈಕ್‌ಗಳನ್ನು ತಯಾರು ಮಾಡುವ ಕಂಪೆನಿಗಳ ಆಕ್ಷೇಪಣೆ ಹಾಗೂ ತಜ್ಞರ ಅಭಿಪ್ರಾಯ ಪಡೆದುಕೊಂಡಿಲ್ಲ. ಸರಕಾರದ ಈ ಆದೇಶದಿಂದ ತಯಾರಾದ ಲಕ್ಷಾಂತರ ಬೈಕ್‌ಗಳು ಶೋರೂಂಗಳಲ್ಲಿ ಮಾರಾಟವಾಗದೆ ಉಳಿಯಲಿವೆ. ಈ ಮೊದಲೇ ಬುಕ್‌ ಮಾಡಿದ್ದ ಗ್ರಾಹಕರು ಸರಕಾರದ ಆದೇಶದ ಬಳಿಕ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತಯಾರಿಕ ಕಂಪೆನಿಗಳಿಗೆ ಭಾರೀ ನಷ್ಟವುಂಟಾಗಲಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next