Advertisement

Karnataka; ಕಾಂಗ್ರೆಸ್ ಗೆದ್ದ ಬಳಿಕ ‘ಕರ್ನಾಟಕ ಕುಡುಕರ ತೋಟ’ವಾಗಿದೆ: ಕುಮಾರಸ್ವಾಮಿ ಟೀಕೆ

12:04 PM Sep 24, 2023 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು! ಕಾರಣವಿಷ್ಟೇ; ಕಾಂಗ್ರೆಸ್ ಸರಕಾರ ‘ಕರ್ನಾಟಕವನ್ನು ಕುಡುಕರ ತೋಟ’ವನ್ನಾಗಿ ಮಾಡಲಿದೆ! ಚುನಾವಣೆಗೆ ಮುನ್ನ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುತ್ತಿದ್ದರು, ಗೆದ್ದ ನಂತರ ‘ಕರ್ನಾಟಕ ಕುಡುಕರ ತೋಟ’ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಸಂಕಲ್ಪ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರಕಾರದ್ದು. ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆಮನೆಗೂ ‘ಮದ್ಯಭಾಗ್ಯ’ ನೀಡಲು ಹೊರಟಿದೆ. ಸರಕಾರವು ಧನಪಿಶಾಚಿ ಅವತಾರವೆತ್ತಿಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದಿದ್ದಾರೆ.

ಖೊಟ್ಟಿ ಗ್ಯಾಟಂಟಿಗಳಿಂದ ಜನರನ್ನು ಯಾಮಾರಿಸಿದ್ದು ಸಾಲದೆಂಬಂತೆ ಪ್ರತೀ ಪಂಚಾಯಿತಿಯಲ್ಲೂ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು. ಅಕ್ಕಿ, ಬೇಳೆ, ದವಸಧಾನ್ಯ, ಹಣ್ಣು ತರಕಾರಿ, ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವಧಿ. ಇದು ಸಮಾಜವಾದವೇ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

3,000 ಜನಸಂಖ್ಯೆಯುಳ್ಳ ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರ್ ತೆಗೆದು ಮನೆಹಾಳು ಮಾಡಲಿದೆ ಸರಕಾರ. ಸುಳ್ಳು ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ. ಅವರ ಸೌಭಾಗ್ಯಕ್ಕೆ ಎದುರಾಗಿದೆ ಸಂಚಕಾರ. ಇದು ಮನೆಹಾಳು ಸರಕಾರ ಎಂದು ಟೀಕಿಸಿದ್ದಾರೆ.

ನಾರಿಯರಿಗೆ ‘ಶಕ್ತಿ’ ತುಂಬುತ್ತೇವೆ ಎಂದ ಸರಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ‘ಗೃಹಲಕ್ಷ್ಮೀ’ ಎಂದ ಸರಕಾರ ಅವರ ಬಾಳಿಗೆ ಗ್ರಹಣವಾಗಿದೆ. ‘ಗೃಹಜ್ಯೋತಿ’ ಎಂದ ಸರಕಾರ ಅವರ ಬಾಳಜ್ಯೋತಿಯನ್ನೇ ನಂದಿಸುತ್ತಿದೆ. ‘ಅನ್ನಭಾಗ್ಯ’ ಎಂದ ಸರಕಾರ, ಈಗ ‘ಮದ್ಯಭಾಗ್ಯ’ ಎನ್ನುತ್ತಿದೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next